ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ಮೋದಿ ಅವರು ರಾಜ್ಯದ ಅಬಕಾರಿ ಇಲಾಖೆಯಲ್ಲಾಗಿರುವ 700 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದಿದ್ದರು.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ, ಭ್ರಷ್ಟಾಚಾರ ನಡೆದಿದ್ದೇ ಆದರೆ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದರು.
ಈಗ ಅದೇ ಸಿದ್ದರಾಮಯ್ಯ ಮದ್ಯ ಮಾರಾಟಗಾರರ ಬಂದ್ ಕರೆಗೆ ಬೆಚ್ಚಿಬಿದ್ದು, ಮದ್ಯ ಮಾರಾಟಗಾರರ ಸಂಘದ ಜೊತೆ ಮಾತುಕತೆ ನಡೆಸಿ ಸಂಘದ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದಾರೆ.
ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತಡೆಯಬೇಕೆನ್ನುವುದು ಮದ್ಯ ಮಾರಾಟಗಾರರ ಸಂಘದ ಪ್ರಮುಖ ಬೇಡಿಕೆಯಾಗಿತ್ತು.
ಸಿದ್ದರಾಮಯ್ಯ ಅವರು ಮದ್ಯ ಮಾರಾಟಗಾರರ ಸಂಘದ ಬೇಡಿಕೆಯನ್ನು ಈಡೇರಿಸಲು ಸಮ್ಮತಿಸೂಚಿಸುವ ಮೂಲಕ ಕರ್ನಾಟಕ ಕಾಂಗ್ರೆಸ್ ಕೃಪಾಪೋಷಿತ ಭ್ರಷ್ಟಾಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಪ್ರಧಾನಿ ಅವರ ಹೇಳಿಕೆಗೆ ಸಾಕ್ಷ್ಯ ಕೇಳಿದ್ದ ಸಿದ್ದರಾಮಯ್ಯ ಅವರೇ, ಇದಕ್ಕಿಂತ ದೊಡ್ಡ ಸಾಕ್ಷ್ಯ ಇನ್ನೇನು ಬೇಕು? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.