ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಹರಿಕೋಟಾದಿಂದ ಇಸ್ರೋ ತನ್ನ 100ನೇ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತದ ಬಾಹ್ಯಾಕಾಶ ಚರಿತ್ರೆಯಲ್ಲಿ ಮಹೋನ್ನತ ಮೈಲಿಗಲ್ಲು ಸ್ಥಾಪಿಸಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
GSLV-F15 ರಾಕೆಟ್ NVS-02 ಉಪಗ್ರಹವನ್ನು ಹೊತ್ತು ನಿಗದಿಪಡಿಸಿದ ಕಕ್ಷೆಗೆ ಯಾವುದೇ ಅಡ್ಡಿ ಆತಂಕವಿಲ್ಲದೆ ಕೊಂಡೊಯ್ದಿದೆ. ಈ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರದ ಸಾಮರ್ಥ್ಯ ಏನು ಎಂಬುದನ್ನು ಇಸ್ರೋ ಜಗತ್ತಿಗೆ ಸಾರಿ ಹೇಳಿದೆ.
ಇಸ್ರೋ ವಿಜ್ಞಾನಿಗಳ ಅವಿರತ ಶ್ರಮ, ನೈಪುಣ್ಯತೆ ಹಾಗೂ ರಾಷ್ಟ್ರಭಕ್ತಿ ಈ ಮಹಾನ್ ಸಾಧನೆಗೆ ಕಾರಣವಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ ಇದಾಗಿದೆ. ಇಂಥ ಅಸಾಧಾರಣ ಸಾಧನೆ ಮಾಡಿದ ಇಡೀ ಇಸ್ರೋ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಭಾರತದ ಬಾಹ್ಯಾಕಾಶ ಪ್ರಯಾಣದ ಭವಿಷ್ಯವು ಎಂದಿಗಿಂತಲೂ ಉಜ್ವಲವಾಗಿದೆ! ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್ ಹರ್ಷ-ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇಸ್ರೋ ಮಹತ್ವಾಕಾಂಕ್ಷೆಯ ನೂರನೇ ರಾಕೆಟ್ NVS-02 ಉಡಾವಣೆ ಮಾಡಿದೆ ಎಂದು ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಐತಿಹಾಸಿಕ ಉಡಾವಣೆ ನಡೆದಿದೆ. ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಇದಾಗಿದೆ. ಇದು ಭಾರತದ ಮ್ಯಾಪ್ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯದ ಮಾಹಿತಿಯನ್ನು ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದೆ.
ಜೆಡಿಎಸ್ ಅಭಿನಂದನೆ- ಇಸ್ರೋ 100ನೇ ರಾಕೆಟ್‌ಉಡಾವಣೆ ಯಶಸ್ವಿಗೊಳಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಹೆಮ್ಮೆಯ ಇಸ್ರೋ ಸಂಸ್ಥೆಗೆ ಜೆಡಿಎಸ್ ಅಭಿನಂದನೆಗಳನ್ನು ಸಲ್ಲಿಸಿದೆ.
ಇಂದು ಬೆಳಿಗ್ಗೆ 6.23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎನ್ ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್ ವಿ-ಎಫ್15 ರಾಕೆಟ್‌ನಭಕ್ಕೆ ಚಿಮ್ಮಿತು. ಈ ಮೂಲಕ ಸ್ವದೇಶಿ ಜಿಪಿಎಸ್(ಬಾಹ್ಯಾಕಾಶ ನ್ಯಾವಿಗೇಷನ್) ಯೋಜನೆಯ ಭಾಗವಾಗಿ NVS-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. 100ನೇ ಉಡ್ಡಯನದೊಂದಿಗೆ ಬಾಹ್ಯಾಕಾಶ ನ್ಯಾವಿಗೇಷನ್‌ನಲ್ಲಿ ಭಾರತ ಹೊಸ ಎತ್ತರಕ್ಕೆ ತಲುಪಿದೆ ಎಂದು ಜೆಡಿಎಸ್ ಹರ್ಷ ವ್ಯಕ್ತಪಡಿಸಿದೆ.