ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಪೂರ್ಣವಾಗಿ ಅಪರಾಧ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಗೇಡಿನ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಿಡಿಸಿದ್ದಾರೆ.
ಬೆಂಗಳೂರಿನ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ಸರ್ಕಾರಕ್ಕೆ ಮಾತ್ರವಲ್ಲ, ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ಬರುತ್ತದೆ.
ರಾಜ್ಯದಲ್ಲಿ ಕೆಲವು ಪೊಲೀಸ್ ಠಾಣೆಗಳು ಉತ್ತಮ ಕೆಲಸ ಮಾಡುತ್ತಿವೆ. ಇನ್ನೂ ಕೆಲವು ಠಾಣೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪೊಲೀಸ್ ಅಧಿಕಾರಿಗಳಿಗೆ ಗೊತ್ತಾಗದೇ ಕ್ರೈಂ ನಡೆಯಲು ಸಾಧ್ಯವಿಲ್ಲ, ಪೊಲೀಸರು ಬಲಾಢ್ಯರ ಕೈಗೊಂಬೆಯಂತೆ ಕೆಲಸ ಮಾಡಬಾರದು. ರಾಯಚೂರಿನ ಕವಿತಾಳ ಠಾಣೆ ದೇಶದಲ್ಲೇ 3ನೇ ಸ್ಥಾನ ಪಡೆದುಕೊಂಡಿದೆ ಎಂದರು.
ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಗುರುತರವಾದ ಕಾರ್ಯವನ್ನು ರಾಜ್ಯದ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಮಾಡುತ್ತಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವುದು, ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಪೂರಕವಾಗಿ ಕೆಲಸ ಮಾಡಬೇಕು.
ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ರಕ್ಷಣೆಯನ್ನು ಒದಗಿಸಿದೆ. ಕಾನೂನು ಎಲ್ಲರಿಗೂ ಒಂದೇ. ಯಾರು ತಪ್ಪು ಮಾಡಿದರೂ ಅದು ತಪ್ಪೇ. ಬಲಾಢ್ಯರು, ಸಮಾಜ ಘಾತುಕ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ದುರ್ಬಲರು, ಪರಿಶಿಷ್ಟ ಜಾತಿ, ವರ್ಗದ ಜನರು, ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಎಲ್ಲರ ಹೊಣೆ. ದುರ್ಬಲರು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು. ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಸಿಎಂ ತಿಳಿಸಿದರು.
ತಹಶೀಲ್ದಾರ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ತಾಲೂಕಿನಲ್ಲಿ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಇದೇ ರೀತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಒ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ಜಿಲ್ಲೆಯ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ಕೆಲವು ಪೊಲೀಸ್ ಠಾಣೆಗಳಲ್ಲಿ ಕೆಲವು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣಕ್ಕೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ.
ಕೊಲೆ, ಸುಲಿಗೆ, ಢಕಾಯಿತಿ, ದರೋಡೆ ಪ್ರಕರಣಗಳು ಕಳೆದ ಒಂದು ವರ್ಷದಲ್ಲಿ ಕಡಿಮೆಯಾಗಿದೆ. ಆದರೆ ಸೈಬರ್ ಅಪರಾಧ, ಡ್ರಗ್ಸ್ ಚಟುವಟಿಕೆಗಳು ಹೆಚ್ಚಾಗಿದ್ದು, ಅದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.
ನಮ್ಮ ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಕನ್ವಿಕ್ಷನ್ ದರ ಕಡಿಮೆಯಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯನ್ನು ಖಾತ್ರಿಪಡಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕನ್ವಿಕ್ಷನ್ ಪ್ರಮಾಣ ಕಳೆದ ವರ್ಷ ಶೇ.3ರಷ್ಟಿತ್ತು ಈಗ ಶೇ.12ಕ್ಕೆ ಸುಧಾರಿಸಿದ್ದು, ಇದನ್ನು ಇನ್ನಷ್ಟು ಉತ್ತಮಪಡಿಸಬೇಕಿದೆ.
ಅಪರಾಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಜಾಗರೂಕರಾಗಿದ್ದರೆ ಅನೇಕ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ. ಎಟಿಎಂ ದರೋಡೆ ಪ್ರಕರಣಗಳು, ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಗಳನ್ನು ಪೊಲೀಸರು ಮುಂಜಾಗರೂಕತೆ ಮೂಲಕ ತಪ್ಪಿಸಬಹುದಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಿಯಾದ ಮುಂಜಾಗರೂಕತೆ ಕೈಗೊಂಡಿದ್ದರೆ, ಅಮಾಯಕರು ಕಾಲ್ತುಳಿತಕ್ಕೆ ಬಲಿಯಾಗುವುದನ್ನು ತಪ್ಪಿಸಲು ಸಾಧ್ಯವಿತ್ತು.
ಜೈಲುಗಳ ಅವ್ಯವಸ್ಥೆ ಪ್ರಕರಣಗಳು, ಮಾದಕ ವಸ್ತು ಜಾಲ ನಿಯಂತ್ರಣದಲ್ಲಿ ಯಾವುದೇ ಲೋಪವನ್ನು ಸಹಿಸಲು ಸಾಧ್ಯವಿಲ್ಲ. ಮಾದಕ ವಸ್ತು ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಿನ ಅಧಿವೇಶನದಲ್ಲಿ ಹೊಸ ಕಾನೂನು ಜಾರಿಗೊಳಿಸಲು ಸರ್ಕಾರ ಸಿದ್ಧವಿದೆ.
ಇದೇ ರೀತಿ ಸೈಬರ್ ಅಪರಾಧಗಳು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಬೇಕಿದೆ.
ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಬಿ.ಬಿ.ಕಾವೇರಿ ಉಪಸ್ಥಿತರಿದ್ದರು.

