ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಿರುವುದು ಶ್ಲಾಘನೀಯ ಎಂದು ಚಿತ್ರದುರ್ಗ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಅವರು ಐಮಂಗಲ ಗ್ರಾಮದ ಹೊರವಲಯದಲ್ಲಿರುವ ಎಸ್ ಜೆ ಎಂ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಎಸ್‌ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಲೆಯ ಅಗತ್ಯಗಳಿಗೆ ಸರ್ಕಾರ ಹಾಗೂ ಇತರರನ್ನು ಅವಲಂಭಿಸದೆ ಗ್ರಾಮಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಒಂದಾಗಿ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯ ಅಭಿವೃದ್ಧಿಗೆ ಮುಂದಾಗುವುದು ಉತ್ತಮ.ಶಾಲೆಯ ಏಳಿಗೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.
ನೂತನವಾಗಿ ಮೂರು ಕೊಠಡಿಗಳ ನಿರ್ಮಾಣಕ್ಕೆ ಈ ದಿನ ಭೂಮಿ ಪೂಜೆ ನೆರವೇರಿಸಲಾಗಿದ್ದು, ಈ ಕಾರ್ಯಕ್ಕೆ ಮಠದ ವತಿಯಿಂದಲೂ ಸಹಕಾರ ನೀಡಲಾಗುವುದು.
ಹಿಡಿದಿರುವ ಸಾಮಾಜಿಕ ಮತ್ತು ಉಪಕಾರ ಎನ್ನುವ ಈ ಕೆಲಸವನ್ನು ನಿಲ್ಲಿಸದೇ ಮುಂದುವರೆಸಿರಿ, ವಿದ್ಯಾಧಾನಕ್ಕಿಂತ ಶ್ರೇಷ್ಠವಾದದ್ದು ಬೇರಿಲ್ಲ. ಈ ಶಾಲೆಯು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನಾರ್ಜನೆಗೆ ಸಹಕಾರಿಯಾಗಲಿ ಎಂದು ಆಶಿಸಿದರು.
ಈ ವೇಳೆ ಮುಖ್ಯಶಿಕ್ಷಕ ಎಸ್.ಎ.ಅಶೋಕ, ಹಿರಿಯ ವಿದ್ಯಾರ್ಥಿ ಸಂಘದ ಬಿ.ಕೆ.ಶಿವಶಂಕರಪ್ಪ, ಕೆ.ಎಂ.ಓಂಕಾರಪ್ಪ, ಟಿ.ಎಲ್.ಬಸವರಾಜಪ್ಪ, ಎಂ.ಮೂರ್ಕಣಪ್ಪ, ಎಸ್.ಗುರುಸಿದ್ದಪ್ಪ, ಸಿ.ರಾಧಾಕೃಷ್ಣ, ಓಂಕಾರಮ್ಮ, ಕವಿತಾ, ಅರವಿಂದ, ಓಂಕಾರಯ್ಯ, ಇಂಜಿನಿಯರ್ ಸಿದ್ದಪ್ಪ, ಸಹಶಿಕ್ಷಕರಾದ ಟಿ.ರಮೇಶ್, ಶಿವಮೂರ್ತಿ, ಅತಿಥಿ ಶಿಕ್ಷಕರಾದ ಎಲ್.ಆರ್.ಕಾರ್ತಿಕ್, ಎಸ್.ಆರ್.ರಮ್ಯಶ್ರೀ, ಓಸುಧಾ, ಸಿಬ್ಬಂದಿ ಡಿ.ಮಲ್ಲಿಕಾರ್ಜುನ, ಶಾರದಮ್ಮ ಹಾಗೂ ವಿದ್ಯಾರ್ಥಿಗಳಿದ್ದರು.