ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿ, ನಿಯಂತ್ರಣ ಮಾಡುವುದು ಅತ್ಯಗತ್ಯ

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ತಿಪಟೂರು : ಸುಳ್ಳು ಸುದ್ದಿ, ಕೆಟ್ಟ ಮಾಹಿತಿಗಳ ಪೋಸ್ಟರ್ ಅಪ್ ಲೋಡ್ ಮಾಡುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲೆ ಮೇಲ್ವಿಚಾರಣೆ ನಡೆಸಿ ನಿಯಂತ್ರಣ ಮಾಡಲು, ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವುದಲ್ಲದೆ ಅಂತಹ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರಿಯಾದ ಕಾನೂನುಗಳು ಇಲ್ಲದ ಕಾರಣ ಮನಃಬಂದಂತಹ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಇಂತಹ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಏರುವ ಅಗತ್ಯವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ನಗರದ ಎಸ್.ಎನ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ಕಾರ್ಯನಿರತ ಪರ್ತಕರ್ತರ ಒಕ್ಕೂಟದ ವತಿಯಿಂದ ೭೮ನೇ ರಾಷ್ಟ್ರೀಯ ಮಂಡಳಿ ಸಮಾವೇಶ ಅಂಗವಾಗಿ ಕಾರ್ಯನಿರತ ಪರ್ತಕರ್ತರ ಒಂದು ದಿನದ ವಿಚಾರ ಸಂಕಿರಣ ಹಾಗೂ ವಿಶ್ವ ತೆಂಗು ದಿನದ ಅಂಗವಾಗಿ ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯ ನಾಲ್ಕನೇಯ ಅಂಗವಾಗಿ ಮಾಧ್ಯಮ ಕ್ಷೇತ್ರವನ್ನು ಗುರುತಿಸಲಾಗಿದೆ. ಎಂದಿಗೂ ಮಾಧ್ಯಮ ಕ್ಷೇತ್ರಕ್ಕೆ ಇರುವ ಅತಿ ದೊಡ್ಡ ಜವಾಬ್ದಾರಿ ಸಂವಿಧಾನದ ಆಶಯಗಳನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡುತ್ತೇನೆ ಅದರ ಜೊತೆಗೆ ಜನರ ಪರವಾಗಿ ಆಡಳಿತಕ್ಕೆ ಚುರುಕು ಮುಟ್ಟಿಸುವ, ತಪ್ಪುಗಳಾದರೆ ತಿದ್ದು ಸರಿದಾರಿಗೆ ತರುವ ಕಾರ್ಯವನ್ನು ಮಾಧ್ಯಮ ಕ್ಷೇತ್ರ ಮಾಡಬೇಕು ಎಂದು ನಮೂದಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣ ಪ್ರಮಾಣ ಹೆಚ್ಚಿದಾಗಿನಿಂದ ಪತಿಕೋದ್ಯಮ ಕ್ಷೇತ್ರಕ್ಕೆ ಹಲವು ಸವಾಲುಗಳು ಎದುರಾಗಿವೆ. ಸಾಮಾಜಿಕ ಜಾಲತಾಣದಿಂದ ವ್ಯಕ್ತಿಯ ವೈಯಕ್ತಿಕ ವಿಚಾರಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಇದರಿಂದಾಗಿ ಹಲವರಿಗೆ ತೊಂದರೆಗಳು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿಯಿಂದ ಬಿತ್ತರವಾಗುವ ಒಂದು ವಿಚಾರದಿಂದ ದೇಶ, ಸಮಾಜ, ವ್ಯಕ್ತಿಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿವೆ.

 ಕರ್ನಾಟಕದಲ್ಲಿ ಬಹಳ ಒಳ್ಳೆಯ ಕಾರ್ಯಗಳನ್ನು ಮಾಧ್ಯಮದವರು ಮಾಡುತ್ತಿದ್ದಾರೆ. ಇಂದಿನ ಮಾಧ್ಯಮ ಕ್ಷೇತ್ರ ಕೇಲವು ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಕಟಣೆ ಮಾಡುತ್ತಿದ್ದು, ರಾಜಕೀಯವಾಗಿ ತಮ್ಮ ತೀರ್ಪು ನೀಡುವ ರೀತಿಯಲ್ಲಿ ಕೂತು ಚರ್ಚಿಸುತ್ತಾರೆ. ಟಿ.ವಿ.ಮಾಧ್ಯಮಗಳಲ್ಲಿ ವಿಶೇಷ ಸಂವಾದವನ್ನು ಏರ್ಪಡಿಸಿ ವೈಯಕ್ತಿಕವಾಗಿ ತೀರ್ಪು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಾಧ್ಯಮಗಳು ಸತ್ಯ ಏನು ಎಂಬುದನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆಯೇ ಹೊರೆತು ಜನರ ಮುಂದೆ ತೀರ್ಪು ನೀಡಲು ಮುಂದಾಗಬಾರದು ಎಂದರು.

 ಕಲಾಕೃತಿಯ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ ವಿಶ್ವತೆಂಗು ದಿನದ ಅಂಗವಾಗಿ ವಿಶೇಷ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದು, ಅನ್ನದಾತರ ಪ್ರಸ್ತುತ ಸಂಕಷ್ಟವನ್ನು ಪರ್ತಕರ್ತರಿಗೆ ಮನವರಿಕೆ ಮಾಡುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಾಧ್ಯಮಗಳು ರೈತರ ಧನಿಯಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದರು.

 ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಪರ್ತಕರ್ತರು ದಿನನಿತ್ಯ ಜೀವನದಲ್ಲಿ ಹಲವು ಹೊಸ ವಿಚಾರಗಳ ಬಗ್ಗೆ ಕಲಿಯುವ ಅವಕಾಶ ದೊರಯುತ್ತದೆ. ಅದರಂತೆ ಮಾಧ್ಯಮಗಳು ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಮಾಡಬೇಕು. ನಾವು ಮಾಡುವ ಸುದ್ದಿಗಳು ಸಮಾಜದ ಮೇಲೆ, ಯುವ ಮನಸ್ಸುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆಂಬ ಸೂಕ್ಷ್ಮತೆ ಪತ್ರಕರ್ತರಾದವರಿಗೆ ಇರಬೇಕು ಎಂದರು. 

ಈ ಸಂದರ್ಭದಲ್ಲಿ ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಸಕ ಕೆ.ಷಡಕ್ಷರಿ, ನಗರಸಭೆಯ ಅಧ್ಯಕ್ಷೆ ಯಮುನಾ ಧರಣೀಶ್, ಭಾರತೀಯ ಕಾರ್ಯನಿರತ ಪರ್ತಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಹೆಚ್ಚುವರಿ ಪ್ರ.ಕಾ ಮದನಗೌಡ, ಎಂ.ವಾಸುದೇವ ಹೊಳ್ಳ, ಶಿವರಾಜು ಆಲ್ಬೂರು, ತಿಪಟೂರು ಕೃಷ್ಣ ಹಲವರು ಇದ್ದರು.

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon