ಮುಂದಿನ ಪೀಳಿಗೆಗೋಸ್ಕರ ಜಲಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ಸಂಸದ ಕಾರಜೋಳ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
   ಚಿತ್ರದುರ್ಗ ಜಿಲ್ಲೆ ಬರದ ನಾಡು ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ, ಬರದ ನಾಡಿನಿಂದ ನಾವು ಸಮೃದ್ದ ನಾಡನ್ನಾಗಿ ಮಾಡುವ ಕಡೆಗೆ ನಮ್ಮ ಪಯಣ ಆರಂಭಿಸಿದ್ದೇವೆ, ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಿಡಿದು ಜನಪ್ರತಿನಿಧಿಗಳವರಗೆ ಎಲ್ಲರೂ ಅವರರವರ ಜವಾಬ್ದಾರಿಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ ಎಂದು ಸಂಸದರು ತಿಳಿಸಿದರು.

ಅಮೂಲ್ಯವಾದ ನೀರನ್ನು ಯಾವ ರೀತಿ ಬಳಸಬೇಕು ಮತ್ತು ಯಾವ ರೀತಿ ಉಳಿಸಬೇಕು ಎನ್ನುವ ಪರಿಜ್ಞಾನವನ್ನು ನಾವೆಲ್ಲರೂ ಹೊಂದಬೇಕಾಗಿದೆ, ಮುಂದಿನ ಪೀಳಿಗೆಗೋಸ್ಕರ ನೀರನ್ನು ಸಂರಕ್ಷಿಸಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಚಿತ್ರದುರ್ಗ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಜಾಪುರ ಹಾಗೂ ಐಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಬಳ್ಳೆಕಟ್ಟೆ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಏರ್ಪಾಡಾಗಿದ್ದ ಜಲ ಅರ್ಪಣ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸದರಾದ ಗೋವಿಂದ ಎಂ ಕಾರಜೋಳ ಮಾತನಾಡಿದರು.

- Advertisement - 

ಜಲ್ ಜೀವನ್ ಮಿಷನ್ ಯೋಜನೆಯಡಿ ಇಂದು ಜಲ ಅರ್ಪಣಾ ದಿವಸ್ ಕಾರ್ಯಕ್ರಮದಡಿಯಲ್ಲಿ  ಜಿಲ್ಲೆಯ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರನ್ನು ಸಮರ್ಪಿಸುತ್ತಿದ್ದೇವೆ. ಜಲವೇ ಜೀವನ ಎಂಬ ಮಾತು ಅಕ್ಷರಶ: ಸತ್ಯ, ನೀರಿಲ್ಲದೇ ನಾಗರೀಕತೆ ಇಲ್ಲ, ನೀರಿಲ್ಲದೇ ಅಭಿವೃದ್ದಿಯೂ ಇಲ್ಲ, ಅದರಲ್ಲೂ ಮಳೆಯಾಶ್ರಿತ ಪ್ರದೇಶವಾದ ನಮ್ಮ ಚಿತ್ರದುರ್ಗ ಜಿಲ್ಲೆಗೆ ನೀರು ಎನ್ನುವುದು ಕೇವಲ ಸಂಪನ್ಮೂಲವಲ್ಲ ಅದು ನಮ್ಮ ಬದುಕಿನ ಜೀವನಾಡಿ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನಸಿನ ಯೋಜನೆ ಜಲ್ ಜೀವನ್ ಮಿಷನ್-ಹರ್‌ಘರ್‌ಜಲ್ ( ಮನೆ-ಮೆನೆಗೆ-ಗಂಗೆ). ಈ ಯೋಜನೆಯ ಮೂಲ ಉದ್ದೇಶ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ದಿನದ ೨೪ ಗಂಟೆಯೂ ಗುಣಮಟ್ಟದ ಶುದ್ದ ಕುಡಿಯುವ ನೀರನ್ನು ನಲ್ಲಿಯ ಮೂಲಕ ಒದಗಿಸುವುದು. ಈ ಹಿಂದೆ ನಮ್ಮ ತಾಯಂದಿರು ಮತ್ತು ಸೋದರಿಯರು ಮೈಲಿಗಟ್ಟಲೇ ದೂರದ ಬಾವಿಗಳಿಂದ, ಹಳ್ಳಗಳಿಂದ, ನದಿಗಳಿಂದ  ನಡೆದುಕೊಂಡು ನೀರು ತರಬೇಕಾದ ಪರಿಸ್ಥಿತಿ ಇತ್ತು, ಆ ಕಷ್ಟವನ್ನು ನೀಗಿಸುವುದೇ ಈ ಯೋಜನೆಯ ಗುರಿಯಾಗಿದೆ. ಎಷ್ಟೋ ಹಳ್ಳಿಗಳಲ್ಲಿ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಶಕಗಳ ಸವಾಲಾಗಿತ್ತು, ಆದರೆ, ಇಂದು ಚಿತ್ರದುರ್ಗ ಜಿಲ್ಲೆಯ ಸಾವಿರಾರು ಮನೆಗಳಿಗೆ  ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ  ನಲ್ಲಿ ಮೂಲಕ ಕುಡಿಯುವ ನೀರು ಸಂಪರ್ಕ ಒದಗಿಸಲಾಗಿದೆ.

- Advertisement - 

ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು ರೂ.೯೪೦ ಕೋಟಿ ಅನುದಾನದಲ್ಲಿ ೧೫೫೯ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅದರಲ್ಲಿ ಈಗಾಗಲೇ ರೂ.೫೦೪ ಕೋಟಿಯಷ್ಟು ಅನುದಾನವನ್ನು ಖರ್ಚು ಮಾಡಿ ೧೦೮೩ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು. ಚಿತ್ರದುರ್ಗ ತಾಲ್ಲೂಕಿನ ಗ್ರಾಮಾಂತರ ಭಾಗಕ್ಕೆ ೨೭೧ ಕಾಮಗಾರಿಗಳಿಗೆ ರೂ.೧೮೯.೦೦ ಕೋಟಿ ಅನುದಾನ ಬಳಸಲಾಗಿದೆ ಎಂದು ಸಂಸದರು ತಿಳಿಸಿದರು.

      ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತದೆ, ಆದರೆ, ಅದರ ನಿರ್ವಹಣೆ ಗ್ರಾಮಸ್ಥರಾದ ನಿಮ್ಮ ಕೈಯ್ಯಲಿದೆ, ನೀರನ್ನು ಅಮೂಲ್ಯವಾಗಿ ಮತ್ತು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ, ಗ್ರಾಮ ಪಂಚಾಯತಿಗಳು ಮತ್ತು ಸ್ವ-ಸಹಾಯ ಸಂಘಗಳು ಈ ಯೋಜನೆಗಳ ಸುಸ್ಥಿರತೆಯನ್ನು  ನೋಡಿಕೊಳ್ಳಬೇಕು, ಅಂತರ್ಜಲ ಹೆಚ್ಚಿಸಲು ಮಳೆ ನೀರು ಕೊಯ್ಲು ಮತ್ತು ಕೆರೆಗಳ ಪುನಶ್ಚೇತನಕ್ಕೂ ನಾವು ಒತ್ತು ನೀಡಬೇಕಿದೆ ಎಂದರು.

   ಕಾರ್ಯಕ್ರಮಕ್ಕೂ ಮುಂಚೆ ಸಂಸದರನ್ನು ಗ್ರಾಮದ ಮಹಿಳೆಯರು ಪೂರ್ಣಕುಂಭದೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡರು, ಸಾಂಕೇತಿಕವಾಗಿ ನಳ ತಿರುಗಿಸುವ ಮೂಲಕ ಜಲ ಅರ್ಪಣಾ ದಿವಸ್ ಕಾರ್ಯಕ್ರಮಕ್ಕೆ ಸಂಸದರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಅಮರನಾಥ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್, ಮುಖಂಡರಾದ ಬಿ.ಸಿ ಹನುಮಂತೇಗೌಡ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

 

 

Share This Article
error: Content is protected !!
";