ಮಹಿಳೆಯರ ಸಮಾನತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ-ನಂದಿನಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಹಿಳೆಯರ ಶಿಕ್ಷಣ
, ಸುರಕ್ಷತೆ, ಭದ್ರತೆ, ಪ್ರಾತಿನಿಧ್ಯ, ಸಬಲೀಕರಣ ಮತ್ತು ಸಮಾನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.‌ಅದೇರೀತಿ ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣಕ್ಕಾಗಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಸರ್ಕಾರದ ವತಿಯಿಂದ ಹಲವಾರು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳನ್ನು ಮಹಿಳೆಯರು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದಿನಿ ಹೇಳಿದರು.

 ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ವತಿಯಿಂದ “ಆತ್ಮವಿಶ್ವಾಸದಿಂದ ಮುಂದೆ ಬಾ” ಮಹಿಳೆಯರಿಗೆ ಅರಿವು ಕಾರ್ಯಕ್ರಮವನ್ನು ತಾಲೂಕಿನ ದುದ್ದನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ‌‌ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.

 ವಕೀಲ ನಿಖಿಲ್.ಎಮ್ ಮಾತನಾಡಿ, ಹಳ್ಳಿಗಳಲ್ಲಿ ಬಡ ಹಾಗೂ ಅನಕ್ಷರಸ್ಥ ಮಹಿಳೆಯರು ಇರುತ್ತಾರೆ. ಅವರಿಗೆ ಸಲ್ಲಬೇಕಾದ, ತಲುಪಬೇಕಾದ ಸರ್ಕಾರಿ ಸೌಲಭ್ಯಗಳು ಸರಿಯಾಗಿ ತಲುಪುವುದಿಲ್ಲ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಹಮ್ಮಿಕೊಂಡು ಸರ್ಕಾರಿ ಯೋಜನಾ ಸೌಲಭ್ಯಗಳ ಬಗ್ಗೆ ಅರಿವು‌ಮೂಡಿಸಿ, ಅವುಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವಂತಾಗಬೇಕು ಎಂದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ‌ಪವನ್ ಕುಮಾರ್ ಎಸ್ ಮಾತನಾಡಿ, ಮಹಿಳೆಯರು ಮೊದಲು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಈ ಕುರಿತು ಮಹಿಳೆಯರಿಗೆ ಅರಿವು ಮೂಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವದ್ಯೋಗ ಕುರಿತು ಮಾಹಿತಿ ನೀಡಲಾಗಿದೆ ಎಂದರು.

ಈ ವೇಳೆ ಸಮಾಜಕಾರ್ಯದ ಪ್ರಾಧ್ಯಾಪಕರಾದ ಕಾವ್ಯ, ಕೃಷ್ಣವೇಣಿ, ಕಿರಣ್ ಟಿ.ಎಸ್, ವೇದವತಿ ಆರ್, ಭಾರತಿ ಲತಾ, ಮನೋಹರ್ ಎಮ್.ಎಸ್ ಸೇರಿದಂತೆ ದ್ವಿತೀಯ ವರ್ಷದ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

 

 

Share This Article
error: Content is protected !!
";