ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ನಗರದ ಬೊಮ್ಮಸಮುದ್ರ ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಈಚೆಗೆ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ನರ್ಸಿಂಗ್ ಆಫೀಸರ್ಗಳಿಗೆ ಸಿಎಸ್ಆರ್ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಉಪಯೋಗಿಸುವ ಮಾರ್ಗಸೂಚಿ ತರಬೇತಿ ನಡೆಯಿತು.
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಇನ್ಫೋಸಿಸ್ ಪೌಂಡೇಶನ್ ಹಾಗೂ ಆಕಾರ್ ಸೋಷಿಯಲ್ ವೆಂಚರ್ಸ್ ವತಿಯಿಂದ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ದಿವಾಕರ್ ಅವರು ಉದ್ಘಾಟಿಸಿದರು.
ಇನ್ಫೋಸಿಸ್ ಪೌಂಡೇಶನ್ನ ತರಬೇತುದಾರರಾದ ಕಲ್ಪನಾ ಮಾತನಾಡಿ, ಇನ್ಫೋಸಿಸ್ ಪೌಂಡೇಶನ್ ಸಿಎಸ್ಆರ್ ನಿಧಿಯಿಂದ ಕರ್ನಾಟಕ ರಾಜ್ಯದ 12 ಜಿಲ್ಲೆಗಳ 305 ವಸತಿ ಶಾಲೆ–ಕಾಲೇಜುಗಳಲ್ಲಿನ ಸುಮಾರು 48070 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿದ್ಯಾರ್ಥಿಗಳ ಉತ್ತಮ ಆರೋಗ್ಯಕ್ಕಾಗಿ ಹಾಗೂ ಶುಚಿತ್ವಕ್ಕಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಟಿ.ಮಂಜಣ್ಣ, ಇನ್ಫೋಸಿಸ್ ಪೌಂಡೇಶನ್ನ ಶಿವಾನಿ ಸೇರಿದಂತೆ ವಸತಿ ಶಾಲೆಗಳ ನರ್ಸಿಂಗ್ ಅಧಿಕಾರಿಗಳು ಇದ್ದರು.