ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಆಯಿತು ಎಂಬುದು ಸರಿಯಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನಾಪಡೆಯ ಶಕ್ತಿ ಮುಂದೆ ಪಾಕಿಸ್ತಾನ ಮಂಡಿಯೂರಿದೆ ಹೊರೆತು ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಆಯಿತು ಎಂಬುದು ಸರಿಯಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಭಯೋತ್ಪಾದಕರು ಪಹಲ್ಗಾಮ್ ನಲ್ಲಿ ನಮ್ಮ ದೇಶದ ಪ್ರವಾಸಿಗರ ಮೇಲೆ ಪೈಶಾಚಿಕ ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿವೆ. ನೆರೆ ದೇಶದ ಸೇನೆಯು ಉಗ್ರ ಪೋಷಣೆ ಮಾಡುತ್ತಾ ಭಾರತದ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಭಾರತ ಪ್ರಬಲ ತಿರುಗೇಟು ನೀಡಿದೆ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಧೃಢ ನಾಯಕತ್ವ ಹಾಗೂ ನಮ್ಮ ಹೆಮ್ಮೆಯ ಸೇನಾಪಡೆಗಳ ಶಕ್ತಿಯ ಮುಂದೆ ಪಾಕಿಸ್ತಾನ ಮಂಡಿಯೂರಿದೆ. ಭಾರತದ ಎಲ್ಲ ಕಡೆ ಮೇಲುಗೈ ಸಾಧಿಸಿದೆ. ಪಾಕಿಸ್ತಾನಕ್ಕೆ ನಡುಕ ಉಂಟಾಗಿತ್ತು. ಉಗ್ರರ ಚಟುವಟಿಕೆಗಳಿಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ದೇಶದ ಪ್ರಧಾನಿ ಅವರು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರು ಹಾಗೂ ಉಗ್ರರ ಶಿಬಿರಗಳ ಮೇಲೆ ನಮ್ಮ ಸೈನಿಕರು ದಾಳಿ ಮಾಡಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದು ಸರಿಯಲ್ಲ. ಜಾಗತಿಕ ಮಟ್ಟದಲ್ಲಿ ತನ್ನ ಮುಖ ಉಳಿಸಿಕೊಳ್ಳಲು ಪಾಕಿಸ್ತಾನ ನಾನಾ ಸರ್ಕಸ್ ಮಾಡಿದೆ. ಭಾರತ ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಒಪ್ಪಿಲ್ಲ. ಅದಕ್ಕೆ ಅವಕಾಶವನ್ನು ಕೂಡ ಕೊಟ್ಟಿಲ್ಲ. ಪ್ರಧಾನಿ ಮೋದಿ ಕೂಡ ಇದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವರು ತಿಳಿಸಿದರು.

ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ಮೋದಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಉಗ್ರ ಪೋಷಕ ಪಾಕಿಸ್ತಾನವನ್ನು ಮಟ್ಟ ಹಾಕುವ ದೃಷ್ಟಿಯಿಂದ ಪೂರ್ಣ ಪ್ರಮಾಣದ ಯುದ್ದ ಆಗಲೇಬೇಕಿತ್ತು ಎಂಬ ನಿಲುವು ಒಂದು ಕಡೆ ಇದೆ. ಮತ್ತೊಂದು ಕಡೆ ರಷ್ಯಾ, ಉಕ್ರೇನ್ ಯುದ್ಧದಿಂದ ಇವತ್ತು ಯಾವ ಸ್ಥಿತಿ ಉಂಟಾಗಿದೆ ಎನ್ನುವ ವಾದವೂ ಇನ್ನೊಂದೆಡೆ. ಈ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ. ಆದರೆ, ಈಗಲಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳದಿದ್ದರೆ ಅದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹಿತಾಸಕ್ತಿಗಾಗಿ ಕೈಗೊಳ್ಳುವ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು. ಪಹಲ್ಗಾಮ್ ದಾಳಿಯ ನಂತರ, ಪ್ರಧಾನಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ಇಡೀ ದೇಶವೇ ಕಂಡಿದೆ. ಪ್ರಧಾನ ಮಂತ್ರಿಗಳು ರಕ್ಷಣಾ ಸಚಿವರೊಂದಿಗೆ ಹಲವಾರು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸರ್ಕಾರವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

 

Share This Article
error: Content is protected !!
";