ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಾಗದೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಇರಾದೆ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಕೇಂದ್ರದ ಮೇಲೆ ಪ್ರತಿಯೊಂದು ವಿಷಯ ಹಾಕಿ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ದೂರಿದರು.
ಕಬ್ಬಿನ ಬೆಲೆ ನಿಗದಿ ವಿಷಯ ಅತ್ಯಂತ ಚಿಕ್ಕದು. ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಬಗೆಹರಿಸಬಹುದಾಗಿದೆ. ಆದರೆ, ಸಿಎಂ ಅವರು ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಟೀಕಿದರು.
ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ ಹೇಳಿ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ನೇರ ಮತ್ತು ಮುಕ್ತವಾಗಿ ಕಬ್ಬು ಬೆಳೆಗಾರರ ಪರವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಆ ಕೆಲಸ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಕ್ಕರೆ ಲಾಬಿಯ ಒತ್ತಡಕ್ಕೆ ಅವರು ಮಣಿದಿರುವ ಸಾಧ್ಯತೆ ಇದೆ. ಅಂತಹ ಒತ್ತಡಕ್ಕೆ ಮಣಿಯದೆ, ಮೊದಲು ಬೆಳೆಗಾರರ ಹಿತಕಾಯುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆ ಹೊಂದಿಲ್ಲ:
ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಯಾವ ನಾಯಕ ಕೂಡ ಕಬ್ಬು ಕಾರ್ಖಾನೆ ಹೊಂದಿಲ್ಲ. ಆ ಪೈಕಿ ಬಂಡೆಪ್ಪ ಕಾಶೆಂಪೂರ ಅವರ ಕಾರ್ಖಾನೆ ಒಂದಿತ್ತು. ಕೆಲವು ದಿನಗಳ ಹಿಂದೆ ಅವರು ಅದನ್ನು ಕೂಡ ಮಾರಿದ್ದಾರೆ. ಹೀಗಾಗಿ, ನಮ್ಮ ಪಕ್ಷದಲ್ಲಿ ಯಾರೊಬ್ಬರ ಬಳಿಯೂ ಸಕ್ಕರೆ ಕಾರ್ಖಾನೆ ಇಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಕ್ರಾಂತಿ ಆಗಲ್ಲ:
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತು ಪತ್ರಕರ್ತರು ಗಮನ ಸೆಳೆದಾಗ, ನವೆಂಬರ್ನಲ್ಲಿ ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ. ನನಗೆ ಸಿದ್ದರಾಮಯ್ಯ ಅವರ ಗುಣ ಗೊತ್ತಿದೆ. ನಮ್ಮ ಪಕ್ಷದಲ್ಲೇ ಇದ್ದಾಗಲೇ ಅದನ್ನು ತಿಳಿದುಕೊಂಡಿದ್ದೇನೆ. ಹೀಗಾಗಿ, ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ತಿಳಿಸಿದರು.
ಡಿಸಿಎಂ ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ. ಅವರಿಗೆ ದೇವರು ಏನೇನು ಹೇಳಿದ್ದಾನೋ ನಮಗೇನು ಗೊತ್ತು? ಅದೇನಿದ್ದರೂ ಡಿ.ಕೆ.ಶಿವಕುಮಾರ್ ಹಾಗೂ ದೇವರಿಗೆ ಸಂಬಂಧಪಟ್ಟ ವಿಚಾರ. ಹಾಗಂತ ಡಿಕೆಶಿ ಅವರೇ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಮತ್ತೆ 2028ಕ್ಕೆ ಕಾಂಗ್ರೆಸ್ ಸರ್ಕಾರವೇ ಬರಲಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 20, 10 ವರ್ಷ ನಾವೇ ಎಂದು ಹೇಳಿದವರು ಏನಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. 2028ಕ್ಕೆ ಏನೇನಾಗುತ್ತೊ ಯಾರಿಗೆ ಗೊತ್ತು ಬಿಡಿ ಎಂದು ಲೇವಡಿ ಮಾಡಿದರು.
ಯಾವ ಗ್ರೇಟರ್: ಸಿಎಂ ಸಿದ್ದರಾಮಯ್ಯ ಅವರ ಗ್ರೇಟರ್ ಮೈಸೂರು ಪ್ರಸ್ತಾಪ ಕುರಿತಂತೆ, ಇದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಪೈಪೋಟಿ. ಡಿಕೆ ಶಿವಕುಮಾರ್ ಮೇಲಿನ ಪೈಪೋಟಿಗಾಗಿ ಸಿದ್ದರಾಮಯ್ಯ ಅವರು ಗ್ರೇಟರ್ ಮೈಸೂರು ಘೋಷಣೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಗ್ರೇಟರ್ ಬೆಂಗಳೂರು ಘೋಷಣೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಗ್ರೇಟರ್ ಮೈಸೂರು ಎನ್ನುತ್ತಿದ್ದಾರೆ. ಯಾವ ಗ್ರೇಟರ್ ಕೂಡ ಆಗುವುದಿಲ್ಲ. ಇವರು ಸುಮ್ಮನೆ ಕಾಲಹರಣ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಲೇವಡಿ ಮಾಡಿದರು.

