ಸಿದ್ದರಾಮಯ್ಯರನ್ನ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಸುವುದು ಹಾಸ್ಯಾಸ್ಪದ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯರನ್ನ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಸುವುದು ಹಾಸ್ಯಾಸ್ಪದ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಮಹಾತ್ಮ ಗಾಂಧಿ ಅವರ ಕೈಯಲ್ಲಿ ರಾಜರ್ಷಿ ಎಂಬ ಬಿರಿದು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಅಧಿಕಾರಕ್ಕಾಗಿ ನಕಲಿ ಗಾಂಧಿಗಳ ಗುಲಾಮಗಿರಿ ಮಾಡುತ್ತಿರುವ ಸಿದ್ದರಾಮಯ್ಯ ಅವರೆಲ್ಲಿ?

- Advertisement - 

ನಾಲ್ವಡಿ ಭೂಪ ಮನೆ ಮನೆ ದೀಪ ಎಂದು ಶತಮಾನದ ನಂತರವೂ ಕನ್ನಡಿಗರು ದಿನನಿತ್ಯ ನೆನೆದುಕೊಳ್ಳುವ ರೀತಿ ಜನ ಮನ್ನಣೆ ಗಳಿಸಿದ್ದ ಅಭಿವೃದ್ಧಿಯ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಕರ್ನಾಟಕದ ಪ್ರತಿ ಮನೆಯ ಮೇಲೂ ಸಾಲದ ಹೊರೆ ಹೊರಿಸಿ, ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿರುವ ಸಿದ್ದರಾಮಯ್ಯ ಅವರೆಲ್ಲಿ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದರು.

ಶತಮಾನದ ಹಿಂದೆಯೇ ಮೈಸೂರು ವಿಶ್ವವಿದ್ಯಾಲಯ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಅನುದಾನ ಕೊಡಲಾಗದೆ 9 ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವ ಸಿದ್ದರಾಮಯ್ಯ ಅವರೆಲ್ಲಿ?
ತಮ್ಮ ಮನೆಯ ಚಿನ್ನಾಭರಣ ಮಾರಿ
KRS ಡ್ಯಾಂ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಜನಸಾಮಾನ್ಯರಿಗೆ ಸಿಗಬೇಕಾಗಿದ್ದ 14 ಸೈಟು ಕಬಳಿಸಿದ ಸಿದ್ದರಾಮಯ್ಯ ಅವರೆಲ್ಲಿ?

- Advertisement - 

ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪು ಫ್ಯಾಕ್ಟರಿ, ಮೈಸೂರು ಪೇಪರ್ ಮಿಲ್ಸ್, ಮೈಸೂರು ಪೇಂಟ್ಸ್ ಅಂಡ್ ವಾರ್ನಿಷಸ್, ಹೀಗೆ ಸಾಲು ಸಾಲು ಕೈಗಾರಿಕೆಗಳನ್ನು ಸ್ಥಾಪಿಸಿದ ನಾಲ್ವಡಿ ಅವರೆಲ್ಲಿ, ಕೈಗಾರಿಕೆಗಳು, ಉದ್ಯಮಿಗಳು, ಹೂಡಿಕೆದಾರರು ರಾಜ್ಯದಿಂದ ವಿಮುಖವಾಗಿವಂತೆ ಮಾಡಿರುವ ಸಿದ್ದರಾಮಯ್ಯ ಅವರೆಲ್ಲಿ?

ಶತಮಾನದ ಹಿಂದೆಯೇ ಮೊಟ್ಟ ಮೊದಲ ಬಾರಿಗೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ನ್ಯಾಯದ ಬದ್ಧತೆ ಎಲ್ಲಿ, ಜಾತಿ ಸಮೀಕ್ಷೆ ಹೆಸರಿನಲ್ಲಿ ಬೇಕಾಬಿಟ್ಟಿ ಬಾಗಿಲಿಗೆ ಸ್ಟಿಕರ್ ಅಂಟಿಸುವ ಸಿದ್ದರಾಮಯ್ಯ ಅವರ ಬದ್ಧತೆ ಎಲ್ಲಿ?

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರೇ, ನಿಮ್ಮ ತಂದೆ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ನಿಮಗೆ ಅಭಿಮಾನ ಇರುವುದು ತಪ್ಪಲ್ಲ. ಆದರೆ ನಮ್ಮ ನಾಡು ಕಂಡ ಧೀಮಂತ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ನಿಮ್ಮ ತಂದೆಯನ್ನು ಹೋಲಿಸುವುದು ಹಾಸ್ಯಾಸ್ಪದ, ಅಸಂಬದ್ಧ ಮತ್ತು ಅದು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾಡುವ ಘೋರ ಅಪಮಾನ.

ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ಮೈಸೂರು ರಾಜಮನೆತನದ ಬಗ್ಗೆ ಗೌರವ ಇದ್ದರೆ, ಈ ಕೊಡಲೇ ತಮ್ಮ ಅಸಂಬದ್ಧ ಹೇಳಿಕೆಯನ್ನ ವಾಪಸ್ಸು ಪಡೆದು ನಾಡಿನ ಜನತೆಯ ಬಳಿ ಕ್ಷಮೆ ಕೇಳಿ ಎಂದು ಅಶೋಕ್ ತಾಕೀತು ಮಾಡಿದರು.

 

 

Share This Article
error: Content is protected !!
";