ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಂದೆ ತಾಯಿ ಮತ್ತು ಹಿರಿಯರನ್ನು ಗೌರವ, ಪ್ರೀತಿ, ವಾತ್ಸಾಲ್ಯ, ಸಹನೆ, ತಾಳ್ಮೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಎಸ್.ಜೆ.ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ, ಹೊಂಬೆಳಕು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಗರದ ಡೆಂಟಲ್ ಕಾಲೇಜು ಆವರಣದಲ್ಲಿರುವ ಎಸ್.ಜೆ.ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ, ಆಯೋಜಿಸಲಾದ ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆ 2007ರ ಕುರಿತಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರನ್ನು ಎರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ ತಾಯಿ ಮತ್ತು ಕುಟುಂಬದ ಹಿರಿಯರು ಎಲ್ಲಾ ಸೇರಿ ಕಿರಿಯರ ಬಾಳಿನ ಜೀವನದ ಏಳಿಗೆಗೆ, ಶ್ರಯೋಭಿವೃದ್ಧಿಗೆ, ಉದ್ದಾರಕ್ಕಾಗಿ ಹಗಲಿರುಳು ಎನ್ನದೆ ಶ್ರಮಿಸಿರುತ್ತಾರೆ. ಇವರನ್ನು ಪ್ರೀತಿಯಿಂದ ಅತ್ಯುತ್ತಮವಾಗಿ ನೋಡಿಕೊಳ್ಳುವುದು, ಗೌರವಿಸುವುದು ಹಾಗೂ ಪೂಜಾ ಭಾವನೆಯಿಂದ ಕಾಣುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು ಉತ್ತಮ ಸಮಾಜ ನಿರ್ಮಾಣ ಮತ್ತು ಸಮಾಜವನ್ನು ಕಾಪಾಡುವಲ್ಲಿ ಹಿರಿಯರ ಪಾತ್ರ ಬೆಟ್ಟದಷ್ಟಿದೆ. 70 ರಿಂದ 80 ವರ್ಷಗಳ ಸುರ್ದಿರ್ಘ ಸೇವೆಯನ್ನು ಅವರಿಂದ ಪಡೆದಿದ್ದೇವೆ. ಇದರಿಂದಾಗಿ ನಾವು ಉತ್ತಮ ಜೀವನ ನಡೆಸುತ್ತಿದ್ದೇವೆ.
ಇದನ್ನು ಆರಿತು ಅತಿ ಹೆಚ್ಚಾಗಿ ತಲೆ ಎತ್ತುತ್ತಿರುವ ವೃದ್ದಾಶ್ರಮಗಳನ್ನು ಕಡಿಮೆ ಗೊಳಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದು ನ್ಯಾಯಾಧೀಶ ಎಂ.ವಿಜಯ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಮಾತನಾಡಿ ಇತ್ತಿಚೀನ ಕಾಲಘಟ್ಟದಲ್ಲಿ ಹಿರಿಯರ ಯೋಗಕ್ಷೇಮ, ಕಷ್ಟ ಸುಖ, ದುಖಃಗಳನ್ನು ವಿಚಾರಿಸುವಲ್ಲಿ ಕಿರಿಯರು ಹಿಂದುಳಿದಿದ್ದಾರೆ. ವಿದ್ಯಾಭ್ಯಾಸ, ಸಂಸ್ಕಾರ, ಹಣ ಹಂತಸ್ತು, ಆಸ್ತಿ ಪಾಸ್ತಿ ಹಾಗೂ ತನ್ನ ಏಳಿಗೆಗೆ ಬೇಕಾದ ಎಲ್ಲವನ್ನು ಹಿರಿಯರಿಂದ ಪಡೆದು, ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಿರುವುದು ಅಪಾಯಕಾರಿಯಾಗಿದೆ. ತಂದೆ ತಾಯಿಯರ ಆಸ್ತಿ-ಪಾಸ್ತಿಗೆ ಆಸೆಯನ್ನು ಬಯಸದೆ, ಅವರನ್ನು ಇಳಿ ವಯಸ್ಸಿನಲ್ಲಿ ಸೇವೆ ಮಾಡಬೇಕು ಎಂದರು.
ಜಿಲ್ಲಾ ವಿಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕ ಮಾತನಾಡಿ ಕೇಂದ್ರ ಸರ್ಕಾರ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007ನ್ನು ಜಾರಿಗೆ ತಂದು ಹಿರಿಯರ ನಾಗರಿಕರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಪರಿಹರಿಸಲು ಪ್ರಯತ್ನಿಸುತ್ತಿದೆ. ಕರ್ನಾಟಕ ಸರ್ಕಾರ ಹಿರಿಯ ನಾಗರಿಕರಿಗೆ ಸಂರಕ್ಷಣಾ ನೀತಿ 2008 ನ್ನು ಜಾರಿಗೆ ತಂದಿದೆ.
ಹಿರಿಯ ನಾಗರಿಕರು ಸಹಾಯವಾಣಿ ಸಂಖ್ಯೆ 1090 ಕರೆ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರದ ಹಾದಿಯನ್ನು ಕಾಣಬಹುದು. ಹಿರಿಯ ನಾಗರಿಕರ ಗುರುತಿನ ಚೀಟಿಯೊಂದಿಗೆ ಶೇ 25% ರಷ್ಟು ರಿಯಾಯಿತಿ ದರದ ಸೌಲಭ್ಯ ಪಡೆಯಬಹದು. ನಗರದಲ್ಲಿ ಸರ್ಕಾರದ ಅನುದಾನದಡಿ 2 ವೃದ್ದಾಶ್ರಮಗಳು ಹಾಗೂ ಅನುದಾನರಹಿತ 4 ವೃದ್ದಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಮತ್ತು ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹಿರಿಯರ ಕಿರಿಯರ ಬಾಂಧವ್ಯ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಪ ಪ್ರಧಾನ ಕಾನೂನು ನೆರವು ಆಭಿರಕ್ಷಕ ಎಂ.ಮೂರ್ತಿಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆ 2007ರ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಲ್.ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್ವರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರೇಮನಾಥ, ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಐ.ಕ್ಯೂ.ಎ.ಸಿ ಸಂಯೋಜಕ ಎಂ.ಎಸ್.ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್ ಸೇರಿದಂತೆ ಹಿರಿಯ ನಾಗರಿಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

