ಹೆಣ್ಣು ಮಕ್ಕಳ ಘನತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ- ನ್ಯಾ.ಎಂ.ವಿಜಯ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೆಣ್ಣು ಮಕ್ಕಳ ಘನತೆ ಕಾಪಾಡುವುದು ನಮ್ಮೆಲ್ಲರ ಜಬ್ದಾರಿಯಾಗಿದೆ. ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಹಲವು ಯೋಜನೆ ಹಾಗೂ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಡಾನ್ ಬಾಸ್ಕೋ ಶಾಲೆ ಸಹಯೋಗದಲ್ಲಿ, ಸೋಮವಾರ ನಗರದ ಡಾನ್ಬಾಸ್ಕೋ ಶಾಲೆಯಲ್ಲಿ ಆಯೋಜಿಸಲಾಗಿದ್ದ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಟೋಬರ್ 11 ರಂದು ಪ್ರತಿ ವರ್ಷ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಆಚರಿಸಲಾಗುತ್ತಿದೆ. ಗರ್ಲ್ಸ್ ವಿಜನ್ ಫಾರ್ ದಿ ಫ್ಯೂಚರ್ಎಂಬುದು ವರ್ಷದ ಧ್ಯೇಯ ವಾಕ್ಯವಾಗಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಬಗ್ಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆ ಧ್ಯೇಯವಾಕ್ಯವನ್ನು ಘೋಷಿಸಿದೆ.

ಇದರೊಂದಿಗೆ ಹೆಣ್ಣು ಮಕ್ಕಳ ಹಕ್ಕುಗಳ ಕುರಿತಾಗಿ ಕಾನೂನು ಜಾಗೃತಿಯನ್ನು ಸಹ ಮೂಡಿಸುವ ಉದ್ದೇಶ ಹೊಂದಿದೆ. ಇದರ ಅಂಗವಾಗಿಯೇ ಇಂದು ಕಾನೂನು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ಹಲವು ಅಂಗಸ್ಥೆಗಳು ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನ್ಯಾ.ಎಂ.ವಿಜಯ್ ತಿಳಿಸಿದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಹೆಣ್ಣು ಮಕ್ಕಳೇ ಇದರಲ್ಲಿ ಬಲಿಪಶುಗಳಾಗಿದ್ದಾರೆ. ಮುಖ್ಯವಾಗಿ ಹೆಣ್ಣು ಮಕ್ಕಳು ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ತಿಳಿದುಕೊಳ್ಳಬೇಕು. ತರಗತಿ, ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ವಿಷಮ ಪರಿಸ್ಥಿತಿಗಳು ಎದುರಾದರೆ ನಿಮ್ಮ ಘನತೆ ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕುಗಳು ನಿಮಗಿವೆ ಎಂದು ನ್ಯಾ.ಎಂ.ವಿಜಯ್ ಹೇಳಿದರು.

ಡಾನ್ ಬಾಸ್ಕೋ ಪ್ರೌಢ ಶಾಲಾ ಪ್ರಾಂಶುಪಾಲ ಉದಯ ಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಅರಿತು ಸಮಾನತೆಯಿಂದ ಜೀವನ ನಡೆಸಬೇಕು. ಸಮಾಜದಲ್ಲಿನ ದೌರ್ಜನ್ಯ, ಬಡತನ ಹಾಗೂ ತಾರತಮ್ಯತೆಯನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ಇಂದಿನ ಶಿಕ್ಷಣ ಕೇವಲ ಪಾಠ ಪ್ರವಚನಗಳಿಗಷ್ಟೇ ಸೀಮಿತವಾಗಿರುವುದು ರ್ದೌಭಾಗ್ಯ.

ಪ್ರಮುಖವಾಗಿ ಹೆಣ್ಣು ಮಕ್ಕಳಿಗೆ ಇಂತಹ ಕಾರ್ಯಗಾರಗಳ ಮೂಲಕ ಅವರ ಹಕ್ಕುಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದು ಪುರುಷ ಪ್ರಧಾನ ಸಮಾಜವಾದ್ದರಿಂದ ಅನೇಕ ದೌರ್ಜನ್ಯಗಳು ಇಂದಿಗೂ ನಡೆಯುತ್ತಲೇ ಇವೆ. ತಮ್ಮ ಜೀವನದಲ್ಲಿ ಬರುವ ಇಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣದ ಜೊತೆಗೆ ಕಾನೂನಿನ ಅರಿವನ್ನು ತಿಳಿದಿರಬೇಕು. ನಿಮ್ಮ ಭವಿಷ್ಯ ಸುಂದರವಾಗಿರಬೇಕಾದರೆ ಬಾಲ್ಯವಸ್ಥೆಯಲ್ಲಿ ಯಾವುದೇ ರೀತಿಯ ಕಿರುಕುಳದೌರ್ಜನ್ಯಕ್ಕೆ ಒಳಗಾಗಬಾರದು. ಉನ್ನತ ಶಿಕ್ಷಣ ಪಡೆದು ಯಾವುದು ಸರಿ, ಯಾವುದು ತಪ್ಪು ಎಂಬುದನ್ನರಿತು ತಮ್ಮ ಭವಿಷ್ಯವನ್ನು ರೂಪಿಕೊಳ್ಳುವ ಸೈನಿಕರಾಗಬೇಕು. ಹೆಣ್ಣಿನ ಜೀವನ ಹಸನಾಗಿಸಲು ಪ್ರತಿಯೊಬ್ಬರು ಧ್ವನಿ ಎತ್ತಬೇಕು ಎಂದು ಹೇಳಿದರು.

ಉಪ ಪ್ರಧಾನ ಕಾನೂನು ಅಭಿರಕ್ಷಕ ಎಂ.ಮೂರ್ತಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಬಾಲ್ಯವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಡಾನ್ಬಾಸ್ಕೋ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

 

Share This Article
error: Content is protected !!
";