ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೆಲವೇ ಜನರಿಂದ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಒಪ್ಪುವುದಿಲ್ಲ. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ಬಹಳ ತಪ್ಪು ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹಳಷ್ಟು ಜನ ಪ್ರತ್ಯಕ್ಷ, ಪರೋಕ್ಷವಾಗಿ ಪಕ್ಷ ಅಧಿಕಾರಕ್ಕೆ ಬರಲು ದುಡಿದಿದ್ದಾರೆ. 1960ರಲ್ಲಿ ತೇನ್ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಎಲ್ಲ ಪತ್ರಿಕೆಗಳು ತೇನ್ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಅವರ ಹೆಸರು ಬರಲಿಲ್ಲ. ಇದೂ ಕೂಡಾ ಹಾಗೇ ಆಗಿದೆ ಎಂದು ವ್ಯಂಗ್ಯವಾಡಿದರು.
ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಮೊದಲಬಾರಿ ಆರಿಸಿ ಬಂದವರೂ ಸೇರಿ ಬಹಳಷ್ಟು ಶಾಸಕರು ಸಂಕಷ್ಟದಲ್ಲಿದ್ದಾರೆ. ಪಕ್ಷ, ಶಾಸಕರು ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಗಮನಿಸಬೇಕು. ಎಲ್ಲರಿಗೂ ಅಷ್ಟೇ ಪ್ರಾಮುಖ್ಯತೆ ಸಿಗಬೇಕು ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅವರದೇ ಸ್ವಂತ ಎಫರ್ಟ್ ಇದೆ. ಎಲ್ಲರ ಸಹಕಾರವಿದೆ. ಹಾಗಾಗಿ, ಸ್ವಾಭಾವಿಕವಾಗಿ ಎಲ್ಲರೂ ಕ್ಲೈಮ್ ಮಾಡುತ್ತಾರೆ. ಆದರೆ, ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾವು ಒಪ್ಪುವುದಿಲ್ಲ. ಎಲ್ಲರಿಗೂ ಅಧಿಕಾರ ಸಿಗಬೇಕು. ಡಾ.ಜಿ.ಪರಮೇಶ್ವರ್ ಅವರು 7 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಬಹಳಷ್ಟು ಕಾರ್ಯಕ್ರಮಮಾಡಿದ್ದರು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪರಮೇಶ್ವರ್ ಅವರು ನಾನು ಸಿಎಂ ಆಕಾಂಕ್ಷಿ ಎಂದು ಮುಂಚೆ ಕೂಡ ಹೇಳಿದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಸಮುದಾಯದವರೇ ಮುಖ್ಯ ಮತದಾರರು. ಹಾಗಾಗಿ, ಆ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕಿದೆ ಎಂದು ಅವರು ತಿಳಿಸಿದರು.
ಎರಡೂವರೆ ವರ್ಷ ಅಧಿಕಾರ ಹಂಚಿಕೆಯ ವಿಚಾರಕ್ಕೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಏನೇ ಮಾತುಕತೆ ಆಗಿದ್ದರೂ ಅದು ದೆಹಲಿಯಲ್ಲಿ ಆಗಿರುತ್ತದೆ. ಬೆಂಗಳೂರಿನಲ್ಲಿ ಆಗಿಲ್ಲ. ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ನಮ್ಮ ಉನ್ನತ ಮಟ್ಟದ ನಾಯಕರು ಕರೆದರೆ ಹೋಗುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗುತ್ತೇನೆ ಎಂದು ಹೇಳಿದ ಮೇಲೆ ಯಾಕೆ ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ರಾಷ್ಟ್ರೀಯ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಬ್ಬರು ಮುಖಂಡರ ಜೊತೆಗೆ ಸಭೆ ಮಾಡಿದ್ದಾರೆ. ಇತ್ಯರ್ಥಕ್ಕೆ ಬರುತ್ತದೆ ಎನ್ನುವ ಆಶಾಭಾವನೆ ಇದೆ. ಅಂತಿಮನಿರ್ಧಾರಕ್ಕೆ ಬರುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಶಾಸಕರ ಭೇಟಿ ಮಾಡಿದ ವಿಚಾರ ಕುರಿತು ಮಾತನಾಡಿದ ಅವರು, ಜೈಲಿನಲ್ಲಿರುವ ಶಾಸಕರು ನಮ್ಮವರು. ಹಾಗಾಗಿ, ಹೋಗಿ ಭೇಟಿಯಾಗಿ ಬಂದಿದ್ದಾರೆ. ಇದರಲ್ಲಿ ಅಂಡರ್ ಕರೆಂಟ್ ಶಾಕ್ ಏನಿಲ್ಲ. ಎಲ್ಲವೂ ಸರಿ ಇದೆ. ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಅದನ್ನು ಅವರೇ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಕುರಿತು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಹುದ್ದೆ ಇದ್ದರೂ ಬದಲಾವಣೆ ಮಾಡುವ ಕಾಲ ಬಂದೇ ಬರುತ್ತದೆ. ಇವತ್ತು ಬರಬಹುದು, ಒಂದು ವರ್ಷ ಬಿಟ್ಟು ಬರಬಹುದು. ಯಾವುದೇ ಸಂದರ್ಭದಲ್ಲಿ ಬರಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

