ಬಿಜೆಪಿಗೆ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ: ರಮೇಶ್ ಜಾರಕಿಹೊಳಿ ಗುಡುಗು
ಚಂದ್ರವಳ್ಳಿ ನ್ಯೂಸ್, ಚಿಕ್ಕೋಡಿ :
ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಒಪ್ಪಿಲ್ಲ, ಒಪ್ಪುವುದೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
ಬಿಜೆಪಿ ನಾಯಕರ ಜೊತೆ ಆರ್‌ಎಸ್ ಎಸ್ ನಡೆಸಿದ ಸಂಘಟನಾ ಸಭೆ ವಿಚಾರವಾಗಿ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ಆರ್‌ಎಸ್‌ಎಸ್ ಸಭೆಯಲ್ಲಿ ಏನ್ ಚರ್ಚೆ ಆಯಿತು ಎಂದು ಹೇಳೋಕೆ ಬರಲ್ಲ. ಸಭೆಯಲ್ಲಿ ಯಾರು ಯಾರನ್ನು ಬೈದ್ರು ಅಂತಾನೂ ಹೇಳೋಕೆ ಬರಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ. ವಿಜಯೇಂದ್ರ ಅವರ ಅಧ್ಯಕ್ಷ ಸ್ಥಾನವನ್ನು ಎಂದೂ ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಪಕ್ಷದಲ್ಲಿ ಜೂನಿಯರ್, ಅವನಿಗೆ ಏನು ಐಡಿಯಾಲಜಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಭಾರತೀಯ ಜನತಾ ಪಕ್ಷದ ಭ್ರಷ್ಟ ಎಂಬ ಲೇಬಲ್ ಗೆ ಅಷ್ಟೇ ಸೀಮಿತವಾಗಿದ್ದಾರೆ. ಭಾರತಿ ಜನತಾ ಪಕ್ಷಕ್ಕೆ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ. ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದರು.
ನಾನು ಯಡಿಯೂರಪ್ಪನವರಿಗೆ ಯಾವತ್ತೂ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ. ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರು ಪ್ರಬಲ ನಾಯಕನಾಗಿಲ್ಲ. ಬಿಜೆಪಿಯ ಆಡಳಿತವನ್ನು ಒಬ್ಬರ ಕೈಯಲ್ಲಿ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ ಎಂದರು.
ಒಬ್ಬರ ಕೈಯಲ್ಲಿ ಪಕ್ಷ ಸಿಕ್ಕರೆ ಸರ್ವಾಧಿಕಾರಿ ಧೋರಣೆ ಬರುತ್ತದೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ ಅಂತ ರಮೇಶ್ ಜಾರಕಿಹೊಳಿ ಇದೇ ವೇಳೆ ತಿಳಿಸಿದರು.