ಪ್ರತೀಕಾರದ ಕೋಮು ಹತ್ಯೆಗಳಿಗೆ ಇತಿಶ್ರೀ ಹಾಡಬೇಕಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಮಂಗಳೂರಿನ ಪ್ರತೀಕಾರದ ಕೋಮು ಹತ್ಯೆಗಳಿಗೆ ನಾವೇ ಇತಿಶ್ರೀ ಹಾಡಬೇಕಿದೆ.
ದೇಶ ಮುಖ್ಯವೋ ದ್ವೇಷ ಮುಖ್ಯವೋ ದಯವಿಟ್ಟು ಅರ್ಥಮಾಡಿಕೊಳ್ಳಿ….. ತುಂಬಾ ಕಷ್ಟದ ಸಮಯ ಕಣ್ರೀ. ತಲೆಗೊಂದು ಮಾತನಾಡಬೇಡಿ. ಕೂಗಾಡಬೇಡಿ, ಕಿರುಚಾಡಬೇಡಿ. ಪೆಟ್ರೋಲ್ ಸುರಿಯಬೇಡಿ, ಬೆಂಕಿ ಹಚ್ಚಬೇಡಿ…..

- Advertisement - 

ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲವಲ್ರೀ. ಸಮಸ್ಯೆ ಒಂದೋ ಎರಡೋ ಅಲ್ಲ, ಹಲವಾರು…..
ಕೊರೋನಾ ವೈರಸ್, ಭೀಕರ ಮಳೆ, ಪಹಲ್ಗಾಮ್ ಹತ್ಯಾಕಾಂಡ, ಪಾಕಿಸ್ತಾನದೊಂದಿಗೆ ಸಂಘರ್ಷ, ರೈತರ ಸಮಸ್ಯೆ, ಇವುಗಳ ಮಧ್ಯೆ ಹಿಂದೂ ಮುಸ್ಲಿಂ ಆಂತರಿಕ ಸಂಘರ್ಷ ಪ್ರಾರಂಭವಾದರೆ  ಅದನ್ನು ತಡೆದುಕೊಳ್ಳುವ ಶಕ್ತಿ ಭಾರತಕ್ಕೆ ಇಲ್ಲ ಕಣ್ರೀ.. ನಿಮ್ಮ ಹಠಗಳು, ಅಪ್ರಬುದ್ದತೆ, ಹೆಸರಿನ ಹಪಾಹಪಿ, ಜನಪ್ರಿಯತೆಯ ಮೋಹ, ಅಧಿಕಾರದ ದಾಹ, ಧಾರ್ಮಿಕ ಮೌಢ್ಯಕ್ಕೆ ದಯವಿಟ್ಟು ದೇಶದ ಜನರನ್ನು ಬಲಿಕೊಡಬೇಡಿ……

- Advertisement - 

ದ್ವೇಷ ಮತ್ತು ಸೇಡು ಯಾವಾಗಲೂ ತೂಗುಯ್ಯಾಲೆಯಂತೆ ವರ್ತಿಸುತ್ತದೆ ರೀ, ಒಬ್ಬೊಬ್ಬರಿಗೆ ಒಂದೊಂದು ಕಾಲ. ಯಾವನೋ ಒಬ್ಬ ತಲೆತಿರುಕ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿದರೆ ರಾಜ್ಯ ಹೊತ್ತಿ ಉರಿಯುತ್ತದೆ…..

ಇನ್ಯಾವನೋ ಒಬ್ಬ ಮತಾಂಧ ಹಸುವಿನ ತಲೆ ತಂದು ದೇವಸ್ಥಾನದ

- Advertisement - 

ಬಳಿ ಎಸೆದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ…..ಮತ್ಯಾವನೋ ಒಬ್ಬ ಧರ್ಮಾಂಧ ಹಂದಿಯ ಮಾಂಸವನ್ನು ಮಸೀದಿಯ ಬಳಿ ಎಸೆದರೆ ರಾಜ್ಯ ಕೋಮುದಳ್ಳುರಿಯಲ್ಲಿ ಬೇಯುತ್ತದೆ…..
ಅದ್ಯಾವನೋ ದೇಶದ್ರೋಹಿ ಪಾಕಿಸ್ತಾನ್ ಜಿಂದಾಬಾದ್ ಎಂದರೆ ರಾಜ್ಯದಲ್ಲಿ ಪ್ರತಿಭಟನೆ ಮುಷ್ಕರಗಳಾಗುತ್ತವೆ.
ಕುಡುಕನೊಬ್ಬನ್ಯಾರೋ ಭಾರತಕ್ಕೆ ದಿಕ್ಕಾರ ಎಂದರೆ ಸೋಷಿಯಲ್ ಮೀಡಿಯಾಗಳು ಘರ್ಜಿಸುತ್ತವೆ. ವಿಕೃತನೊಬ್ಬನ ಫೇಕ್ ಪೋಟೋಷಾಪ್ ಗೆ ಜನಸಮೂಹ ಹುಚ್ಚರಂತೆ ಪ್ರತಿಕ್ರಿಯಿಸುತ್ತದೆ…….
ಏನು ಇದೆಲ್ಲಾ, ? ನಾವೆಲ್ಲ ಯಾವ ವ್ಯವಸ್ಥೆಯಲ್ಲಿ ಇದ್ದೇವೆ ?,

ಕೇವಲ 4/5 ಜನರ ದುಷ್ಟ ಶಕ್ತಿ ಕೋಟ್ಯಾಂತರ ಜನರ ಭಾವನೆ ಕೆರಳಿಸಿ ರೊಚ್ಚಿಗೆಬ್ಬಿಸುತ್ತದೆ ಎಂದರೆ ನಮ್ಮ ಮಾನಸಿಕ ಸ್ಥಿತಿಗತಿಯ ಬಗ್ಗೆ ಮತ್ತೊಮ್ಮೆ

ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ನಂಬಿಕೆ ಭಕ್ತಿ ಭಾವನೆಗಳು ಕೆಟ್ಟ ಕೊಳಕ ಮನಸ್ಥಿತಿಯವರ ಪ್ರತಿಕ್ರಿಯೆಯಿಂದ ಉದ್ವೇಗಗೊಳ್ಳುತ್ತದೆ ಎಂದರೆ ಅದು ನಮ್ಮ ಅರಿವಿನ ಆಳದ ಡಾಂಬಿಕತನ ಎಂದೆನಿಸುವುದಿಲ್ಲವೇ?…..

ಕೆಲವೇ ಜನರ ಕಿಡಿಗೇಡಿ ಕೃತ್ಯಗಳನ್ನು ಪೋಲಿಸ್ ವ್ಯವಸ್ಥೆಗೆ ಒಪ್ಪಿಸಿ ಅದೊಂದು ಕ್ರಿಮಿನಲ್ ಅಪರಾಧ ಎಂದು ಕಾನೂನಿನ ತೆಕ್ಕೆಗೆ ನೀಡಿ ಅದನ್ನು ನಿರ್ಲಕ್ಷಿಸದೆ ಸಿನಿಕತನದಿಂದ ವರ್ತಿಸಿ ಅನೇಕ ಅಮಾಯಕ ಬಡಜನರ ಸಾವು ನೋವುಗಳಿಗೆ, ಅಪಾರ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾಗುವ ನಮ್ಮ ಸಾಮಾಜಿಕ ವ್ಯವಸ್ಥೆ ಅದು ಹೇಗೆ ನಾಗರಿಕ ಸಮಾಜ ಎಂದೆನಿಸಿಕೊಳ್ಳುತ್ತದೆ……

ಕೇವಲ ಕೋಟಿಗೊಬ್ಬರ ಮನೆಮುರುಕತನ ಉಳಿದೆಲ್ಲ ಜನರನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆಯೆಂದರೆ ನಮ್ಮಗಳ ತಿಳುವಳಿಕೆಯ ಗಟ್ಟಿತನವನ್ನು ಪ್ರಶ್ನೆಮಾಡಿಕೊಳ್ಳಲೇ ಬೇಕು……

ಇದು ಸಾಮಾಜಿಕ ಸಮಸ್ಯೆಯೋ, ರಾಜಕೀಯ ಸಮಸ್ಯೆಯೋ, ಆರ್ಥಿಕ ಸಮಸ್ಯೆಯೋ ಅಥವಾ ನಮ್ಮಗಳ ಮಾನಸಿಕ ಸಮಸ್ಯೆಯೋ ಅರ್ಥವಾಗುತ್ತಿಲ್ಲ. ಕನಿಷ್ಠ ನಾವುಗಳಾದರೂ ಈ ದುಷ್ಟಕೂಟದ ಸಂಚಿಗೆ ಬಲಿಯಾಗದೆ ಪ್ರಬುದ್ಧತೆಯೆಡಗೆ ಹೆಜ್ಜೆ ಇಡೋಣ. ನಮ್ಮ ಮಕ್ಕಳ ಕಾಲಕ್ಕಾದರೂ ನೆಮ್ಮದಿಯ ಶಾಂತಿಯುತ ಸಮಾಜ ಕಟ್ಟೋಣ……..

ವಿವೇಚನೆ ಎಂಬುದು ಬಹುದೊಡ್ಡ ಪರಿಕಲ್ಪನೆ ಕಣ್ರೀ, ತುಂಬಾ ತೂಕ ಮತ್ತು ಬೆಲೆಯುಳ್ಳದ್ದು, 360 ಡಿಗ್ರಿ ಕೋನದ ವಿಶಾಲತೆ ಹೊಂದಿದೆ…..

ದ್ವೇಷ ಭುಗಿಲೆದ್ದು ಗಲಭೆಯ ಹಂತ ತಲುಪಿದರೆ ಅಲ್ಲಿಂದ ಮುಂದೆ ನ್ಯಾಯ, ನೀತಿ, ಧರ್ಮ, ಇರುವುದೇ ಇಲ್ಲ. ರೌಡಿಸಂ ಕ್ಷೇತ್ರದಲ್ಲಿ ಒಂದು ಮಾತಿದೆ ” ಯಾರ ಕೈ ಮೊದಲಾಗುತ್ತದೆಯೋ ಅವರೇ ವಿಜೇತರು ” ಆ ರೀತಿ ಆಗುವುದು ಬೇಡ………

ಯಾವನೋ ಒಬ್ಬ ಪತ್ರಕರ್ತ, ಯಾವನೋ ಒಬ್ಬ ರಾಜಕಾರಣಿ, ಯಾವನೋ ಒಬ್ಬ ಸಂಘಟಕ, ಯಾವನೋ ಒಬ್ಬ ಧಾರ್ಮಿಕ ಮುಖಂಡ, ಯಾವನೋ ಒಬ್ಬ ಸಿನೆಮಾ ನಟ, ಯಾವನೋ ಒಬ್ಬ ಅಧಿಕಾರಿ, ತನ್ನ ತೆವಲುಗಳಿಗೆ ಬಾಯಿಗೆ ಬಂದಂತೆ ಮಾತನಾಡಿ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ…….

ಈ ಬಗ್ಗೆ ಪ್ರತಿಕ್ರಿಯಿಸುವ ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ ಭಾಷೆ ತುಂಬಾ ಉದ್ರೇಕಕಾರಿಯಾಗಿದೆ. ಅದರಿಂದ ಪ್ರೇರಿತರಾದ ಜನರು ಸಹ ಅದೇ ಭಾಷೆ ಬಳಸುತ್ತಿದ್ದಾರೆ.

ಹೌದು, ಕೆಲವು ನಡೆಯಬಾರದ ಘಟನೆಗಳು ನಡೆಯುತ್ತಿವೆ. ಅದನ್ನು ನಮ್ಮ ಪೋಲೀಸ್ ವ್ಯವಸ್ಥೆ ಖಂಡಿತ ನಿಯಂತ್ರಣ ಮಾಡುತ್ತದೆ. ಅದಕ್ಕೆ ಆ ಶಕ್ತಿ ಇದೆ. ಆದರೆ ವ್ಯವಸ್ಥೆಯ ಸಂಪೂರ್ಣ ಅರಿವಿಲ್ಲದ ಸಾಮಾನ್ಯ ಜನ ಮತ್ತು ಅವರ ಅಭಿಪ್ರಾಯಗಳಿಗೆ ವೇದಿಕೆ ಕಲ್ಪಿಸುತ್ತಿರುವ ಮಾಧ್ಯಮಗಳುಸೋಷಿಯಲ್ ಮೀಡಿಯಾಗಳು ತಮ್ಮ ಸೂಕ್ಷ್ಮತೆಯನ್ನು ಕಳೆದುಕೊಂಡಿವೆ……

ಸಾಮಾನ್ಯ ಜನರು ಕೇವಲ ನೇರ ದೃಶ್ಯಗಳನ್ನು ಮಾತ್ರ ನೋಡಿ ಪ್ರತಿಕ್ರಿಯಿಸುತ್ತಾರೆ. ಇಡೀ ವ್ಯವಸ್ಥೆಯ ಒಳ ಅರ್ಥ ಅಥವಾ ಒಳ ನೋಟ, ಚಿಂತಿಸುವ ದೂರದೃಷ್ಟಿ ಅವರಿಗೆ ಇರುವುದಿಲ್ಲ……

ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ” ಎಂಬುದು ಕೇವಲ ನಾಣ್ಣುಡಿಯಲ್ಲ ಅದು ವಾಸ್ತವ……
ಧರ್ಮದ ವಿಷಯಗಳ ಗಲಭೆಯ ಬಗ್ಗೆ ಒಂದು ಸೂಕ್ಷ್ಮ ಅರ್ಥಮಾಡಿಕೊಳ್ಳಿ.

ಒಬ್ಬರು ಮಾತಿನಲ್ಲಿ ಹೆದರಿಸಿದರೆ ಇನ್ನೊಬ್ಬರು ಹೊಡೆಯುತ್ತಾರೆ, ಒಬ್ಬರು ಹೊಡೆದರೆ ಇನ್ನೊಬ್ಬರು ಚಾಕು ತೆಗೆಯುತ್ತಾರೆ, ಒಬ್ಬರು ಚಾಕು ತೆಗೆದರೆ ಇನ್ನೊಬ್ಬರು ಮಚ್ಚು ತೆಗೆಯುತ್ತಾರೆ. ಒಬ್ಬರು ಮಚ್ಚು ತೆಗೆದರೆ ಮತ್ತೊಬ್ಬರು ಲಾಂಗು ತೆಗೆಯುತ್ತಾರೆ. ಒಬ್ಬರು ಲಾಂಗ್ ತೆಗೆದರೆ ಮತ್ತೊಬ್ಬರು ಬಂದೂಕು ತೆಗೆಯುತ್ತಾರೆ, ಒಬ್ಬರು ಬಂದೂಕು ತೆಗೆದರೆ ಮತ್ತೊಬ್ಬರು ಬಾಂಬು ತೆಗೆಯುತ್ತಾರೆ, ಒಬ್ಬರು ಬಾಂಬು ತೆಗೆದರೆ ಮತ್ತೊಬ್ಬರು ಆತ್ಮಾಹುತಿ ಬಾಂಬರ್ ಆಗುತ್ತಾರೆ. ಇದು ಹೀಗೆಯೇ ಸಾಗುತ್ತದೆ. ಇದಕ್ಕೆ ಕೊನೆಯೇ ಇಲ್ಲ…..

ಇಂದಿನ ಬಹುಮುಖ್ಯ ಅವಶ್ಯಕತೆ ಚರ್ಚೆಗಳ ಮುಖಾಂತರ ಜಗಳ ಹೆಚ್ಚಿಸುವುದಲ್ಲ, ಶೂಟ್ ಮಾಡಿ, ಕೊಂದು ಬಿಡಿ ಎಂದು ಪ್ರಚೋದಿಸುವುದಲ್ಲ. ಒಬ್ಬ ಹೇಳುತ್ತಿದ್ದ, ನಾಲ್ಕು ಭಾರಿಸಿದರೆ ಎಲ್ಲಾ ಸರಿ ಹೋಗುತ್ತದೆ ಎಂದು. ಅಯ್ಯಾ ಈ ದೇಶದಲ್ಲಿ ಇನ್ನೂ ಗಲ್ಲು ಶಿಕ್ಷೆ ಜಾರಿಯಲ್ಲಿದೆ. ಆದರೂ ಗಂಟೆಗೆ ಎಷ್ಟೋ ಕೊಲೆಗಳು, ಅತ್ಯಾಚಾರಗಳು ನಡೆಯುತ್ತದೆ. ಭ್ರಷ್ಟಾಚಾರಕ್ಕೆ ಕಠಿಣ ಶಿಕ್ಷೆ ಇದೆ. ಆದರೆ ಅದು ಸರ್ವಾಂತರ್ಯಾಮಿಯಾಗಿದೆ. ಶಿಕ್ಷೆ ಮತ್ತು ಹೊಡೆತ ಒಂದು ಅಸ್ತ್ರಗಳು ಅಷ್ಟೇ. ಅದೇ ಅಂತಿಮವಲ್ಲ……

ಮಂಗಳೂರಿನ ಪ್ರತೀಕಾರದ  ಹಿಂಸೆ ಗಮನಿಸಿದ ಮೇಲೆ ಪೊಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು. ಕ್ರಿಮಿನಲ್ ಗಳ ಅಟ್ಟಹಾಸಕ್ಕೆ ತಡೆ ಒಡ್ಡಬೇಕು.

ಈಗಿನ ಸಮಯದಲ್ಲಿ ಸಂಯಮದಿಂದ ಜಗಳನ್ನು ಬಿಡಿಸುವುದು ಮುಖ್ಯ. ದ್ವೇಷವನ್ನು ಕಡಿಮೆ ಮಾಡುವುದು ಮುಖ್ಯ. ಸತ್ಯ ‌ಏನೇ ಇರಲಿ ಈ ಕ್ಷಣದಲ್ಲಿ ಸಭ್ಯತೆಯೇ ಮುಖ್ಯ. ಅದೇ ಈ ದೇಶಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ನಾವು ಸಲ್ಲಿಸಬಹುದಾದ ಬಹುದೊಡ್ಡ ಸೇವೆ‌………
ಲೇಖನ:ವಿವೇಕಾನಂದ. ಎಚ್. ಕೆ. 9844013068……..

 

Share This Article
error: Content is protected !!
";