ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಬೇಕು-ಟಿಬಿ ಜಯಚಂದ್ರ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಜನಾಂಗದ ಎಲ್ಲರೂ ಒಗ್ಗೂಡಬೇಕು ಎಂದು ಶಾಸಕರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಕರೆ ನೀಡಿದರು.
ತುಮಕೂರು ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಕುಂಚಿಟಿಗ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ವೊಡೇ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಡಬ್ಲ್ಯೂ.ಹೆಚ್.ಹನುಮಂತಪ್ಪ ಸ್ಮಾರಕ ಉಪನ್ಯಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ವತಿಯಿಂದ ಸನ್ಮಾನ ಸ್ಪೀಕರಿಸಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲಿ ಕುಂಚಿಟಿಗ ಸಮಾಜ ನಾಲ್ಕು ಭಾಗಗಳಾಗಿ ಹರಿದು ಹಂಚಿ ಹೋಗಿದೆ. ಸಮಾಜವನ್ನು ಒಗ್ಗೂಡಿಸುವ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಇದಕ್ಕಾಗಿ ಸಮಾಜದ ಎಲ್ಲರೂ ಒಗ್ಗೂಡಬೇಕು ಎಂದು ಅವರು ಮನವಿ ಮಾಡಿದರು.
ತುಮಕೂರು ಜಿಲ್ಲೆ ಸಮಗ್ರ ನೀರಾವರಿ ಆಗಲಿದೆ. ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ಯೋಜನೆಗಳಿಂದ ಇಡೀ ಜಿಲ್ಲೆ ನೀರಾವರಿ ಸೌಲಭ್ಯ ಹೊಂದಲಿದೆ. ಜಿಲ್ಲೆಯ ನೀರಾವರಿ ಸೌಲಭ್ಯಕ್ಕಾಗಿ ಪ್ರಮಾಣಿಕವಾಗಿ ದುಡಿಯುತ್ತಿರುವುದಾಗಿ ಅವರು ಹೇಳಿದರು.
ಬಿಪಿಎಂಪಿ ಡೆಪ್ಯೂಟಿ ಕಮಿಷನರ್ ಹಾಗೂ ರಾಜ್ಯ ಒಕ್ಕಲಿಗ ಸಂಘದ ದಂತ ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷರಾದ ಬೇತೂರು ಪಾಳ್ಯ ಜೆ.ರಾಜು ಸನ್ಮಾನ ಸ್ಪೀಕರಿಸಿ ಮಾತನಾಡಿ, ಸಂಘಟನೆ ಹಾಗೂ ನಾಯಕತ್ವದ ಕೊರತೆಯಿಂದ ಕುಂಚಿಟಿಗ-ಒಕ್ಕಲಿಗರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಡೀ ಒಕ್ಕಲಿಗ ಸಂಘದಲ್ಲಿ ಕುಂಚಿಟಿಗ ಜನಾಂಗದಿಂದ ಆಯ್ಕೆಯಾಗಿರುವ ಏಕೈಕ ನಿರ್ದೇಶಕ ನಾನೊಬ್ಬನೆ.
ಆದರೂ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕುಂಚಿಟಿಗ ಒಕ್ಕಲಿಗ ಸಮಾಜಕ್ಕೆ ಆಗಬೇಕಿರುವ ಕೆಲಸ ಕಾರ್ಯಗಳನ್ನು ಬದ್ಧತೆಯಿಂದ ಮಾಡುತ್ತಿದ್ದೇನೆ ಎಂದು ಹೇಳಿದರು.
ತುಮಕೂರು ಕುಂಚಿಟಿಗ ಒಕ್ಕಲಿಗ ಸಂಘದ ಕಟ್ಟಡ ನಿರ್ಮಾಣ ಕಾರ್ಯಕ್ಕೆ 5 ಲಕ್ಷ ರೂ.ಗಳ ದೇಣಿಗೆ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದ ಜೆ ರಾಜು, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ನಾನು ಎಂದೂ ಹಿಂಜರಿಕೆ ಮಾಡುವುದಿಲ್ಲ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿನ ಕುಂಚಿಟಿಗ ಒಕ್ಕಲಿಗ ಸಮಾಜದ ಅಭಿವೃದ್ಧಿ ಕಾರ್ಯಗಳಿಗೂ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತೇನೆಂದು ಅವರು ತಿಳಿಸಿದರು.
ಹಿಂದುಳಿದ ಸಮಾಜವೊಂದು ಅಭಿವೃದ್ಧಿ ಸಾಧಿಸಲು ಶಿಕ್ಷಣ ಬಹಳ ಮುಖ್ಯ. ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪೋಷಕರು ಮುಂದಾಗಬೇಕು. ಅದೇ ರೀತಿ ಮಕ್ಕಳು ಕಷ್ಟಪಟ್ಟು ಓದಿ ಕುಟುಂಬವನ್ನು ಮುನ್ನೆಲೆಗೆ ತರಬೇಕು ಎಂದು ರಾಜು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ, ಶಾಸಕ ಜಯಚಂದ್ರ ಅವರು ಕುಂಚಿಟಿಗ ಸಮಾಜದ ಅತ್ಯಂತ ಹಿರಿಯರು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲೂ ಅತ್ಯಂತ ಹಿರಿಯ ಶಾಸಕರಿದ್ದಾರೆ. ಅವರಿಗೆ ಕೂಡಲೇ ರಾಜ್ಯ ಸಚಿವ ಸಂಪುಟದಲ್ಲಿ ಸೇರಿಕೊಂಡು ಕುಂಚಿಟಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಆಗ್ರಹ ಮಾಡಿದರು.
ಕುಂಚಿಟಿಗ ಜನಾಂಗ ರಾಜಕೀಯವಾಗಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕುಂಚಿಟಿಗ ಸಮಾಜವನ್ನು ಕೇಂದ್ರದ ಒಬಿಸಿ ಮೀಸಲಿನಲ್ಲಿ ಕೈಬಿಟ್ಟಿರುವುದರಿಂದ0 ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಹಿಂದುಳಿಗ ವರ್ಗ (ಒಬಿಸಿ)ಕ್ಕೆ ಸೇರಿಸುವಂತೆ ಆಗ್ರಹಪಡಿಸಬೇಕು, ಅಲ್ಲದೆ ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ ಜಾರಿಗೆ ತರಬೇಕು ಎಂದು ಹೇಳಿದರು.
2023ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಬಾಜನರಾಗಿರುವ ಡಾ.ಟಿ.ಬಿ ಜಯಚಂದ್ರ ಅವರನ್ನು ಸಮಾಜ ಸಂಪೂರ್ಣವಾಗಿ ನಂಬಿಕೊಂಡಿದೆ. ಈ ಸಮಾಜಕ್ಕೆ ಅವರಿಂದ ಇನ್ನೂ ಸಾಕಷ್ಟು ಸೇವೆ ಆಗಬೇಕಿದೆ. ಹಾಗಾಗಿ ಸಂಪುಟ ದರ್ಜೆಯ ಸಚಿವರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಬೇಕೆಂದು ಆಗ್ರಹ ಮಾಡಿದರು.
ಶಿಕ್ಷಣ ತಜ್ಞ, ಚಿಂತಕ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಡಬ್ಲ್ಯೂ.ಹೆಚ್. ಹನುಮಂತಪ್ಪ ಸ್ಮಾರಕ ಉಪನ್ಯಾಸ ಮಾಲೆ ಕುರಿತು ಮಾತನಾಡಿ ವೊಡೇ ಕುಟಂಬ ಸಾಕಷ್ಟು ಉತ್ತುಂಗದಲ್ಲಿದೆ. ಸಮಾಜಕ್ಕೆ ಬೆನ್ನಾಗಿದೆ. ಈ ವೊಡೇ ಕುಟುಂಬ ಕುರಿತು ಸಂಶೋಧನೆ ಮಾಡುವುದರ ಜೊತೆಯಲ್ಲಿ ಸಮಗ್ರ ಗ್ರಂಥವನ್ನು ಹೊರ ತರುವುದಾಗಿ ಅವರು ತಿಳಿಸಿದರು.
ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಕೆ.ಜೈಪ್ರಕಾಶ್ ಮಾತನಾಡಿ ಕುಂಚಿಟಿಗ ಸಮಾಜದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶಿಕ್ಷಣದಿಂದಲೇ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಹಾಗಾಗಿ ಎಷ್ಟೇ ಬಡತನ ಇದ್ದರೂ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಇತ್ತೀಚೆಗೆ ಪಿಎಸ್ಐ ಪರೀಕ್ಷೆಯಲ್ಲಿ ಆಯ್ಕೆಯಾಗಿದ ಸಮಾಜದ ಹತ್ತು ಮಂದಿ ಸಾಧಕರು ಹಾಗೂ ಸಮಾಜದ ಮುಖಂಡರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ಜ್ಯೋತಿ ಗಣೇಶ್, ಡಾ.ನಾಗಣ್ಣ, ಎಲ್.ಲಿಂಗಣ್ಣ, ಆರ್.ದೊಡ್ಡಲಿಂಗಪ್ಪ, ರೊಳ್ಳ ಜಿಪಂ ಸದಸ್ಯ ಅನಂತರಾಜು, ದಾನಿ ಕೆ.ವಿ.ನಾಗಪ್ಪ, ತಡಕಲೂರು ಕಿರಣ್ ಗೌಡ, ಲಲಿತ ಮಲ್ಲಪ್ಪ, ಜಗದೀಶ್, ಕೆ.ಶ್ರೀಧರ್, ಕೆ.ಅಶೋಕ್ ಕುಮಾರ್, ಸತೀಶ್, ಬಸವರಾಜ್, ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.