ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಗಡಿಯಾಚೆಯಿಂದ ಸಂಭವಿಸುವ ಭಯೋತ್ಪಾದನೆ ವಿರುದ್ಧ ಪ್ರತಿದಾಳಿ ನಡೆಸಲು ಹಿಂಜರಿಯುವುದಿಲ್ಲ. ದೇಶದ ಮೇಲೆ ದಾಳಿ ಮಾಡುವವರು ಪಾಕಿಸ್ತಾನ ಸೇರಿದಂತೆ ಎಲ್ಲೇ ಇದ್ದರೂ ಭೇಟೆಯಾಡುವುದಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ಗುಡುಗಿದ್ದಾರೆ.
ಉಗ್ರರು ಭಾರತದ ಮೇಲೆ ದಾಳಿ ಮಾಡಿದರೆ, ಭಯೋತ್ಪಾದನೆ ಮುಂದುವರಿಲುವವರೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ನಮ್ಮ ಆತ್ಮರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ. ಇದು ನಮ್ಮ ಮೂಲಭೂತ ಕರ್ತವ್ಯವಾಗಿದೆ ಎಂದು ಫ್ರೆಂಚ್ ದಿನಪತ್ರಿಕೆ ಲೆ ಫಿಗರೊಗೆ ಹೇಳಿದ್ದಾರೆ.
ಸಂಘರ್ಷವು ಭಾರತ ಮತ್ತು ಭಯೋತ್ಪಾದನೆ ನಡುವಿನದ್ದು ಎಂದು ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಪ್ರತಿಯಾಗಿ ಭಾರತದ ಆಫರೇಷನ್ ಸಿಂಧೂರ ಕುರಿತು ಅವರು ಹೇಳಿದರು.
ಪಾಕಿಸ್ತಾನ ಮತ್ತು ಚೀನಾ ನಡುವಿನ ನಿಕಟ ಸಂಬಂಧದ ಕುರಿತು ಮಾತನಾಡಿದ ಜೈಶಂಕರ್, ಭಯೋತ್ಪಾದನೆಯಂತಹ ವಿಷಯದಲ್ಲಿ ನಾವು ದ್ವಿಮುಖ ನೀತಿಗಳನ್ನು ಸಹಿಸುವುದಿಲ್ಲ. ಕೊನೆಯಲ್ಲಿ ಇದು ನಮ್ಮೆಲ್ಲರಿಗೂ ಸಂಬಂಧಿಸಿದ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಭಾರತ-ಅಮೆರಿಕ ಸಂಬಂಧಗಳ ಕುರಿತು ಮಾತನಾಡಿದ ಅವರು, ಕಳೆದ 25 ವರ್ಷಗಳಿಂದಲೂ ಐವರು ಅಮೆರಿಕನ್ ಅಧ್ಯಕ್ಷರ ನೇತೃತ್ವದಲ್ಲಿ ಅಮೆರಿಕದ ಜೊತೆಗಿನ ನಮ್ಮ ಸಂಬಂಧ ನಿರಂತರವಾಗಿ ಬಲಗೊಂಡಿವೆ ಎಂದರು.
ಚೀನಾದ ಬಗ್ಗೆ ಚರ್ಚಿಸುತ್ತಾ, 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ನಡೆದ ಮಿಲಿಟರಿ ಘರ್ಷಣೆಯ ನಂತರ ಸಂಬಂಧಗಳು ಕಷ್ಟವಾಗಿದೆ. ನಮಗೆ ಪ್ರಮುಖ ಪ್ರಶ್ನೆಯೆಂದರೆ, ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಹೇಗೆ ಖಚಿತಪಡಿಸಿಕೊಳ್ಳುವುದು? ಎನ್ನುವುದಾಗಿದೆ. ಅದು ಇಲ್ಲದೆ, ಉಳಿದೆಲ್ಲವೂ ಪರಿಣಾಮ ಬೀರುತ್ತದೆ. ಆದಾಗ್ಯೂ, ನೇರ ವಿಮಾನಗಳ ಪುನರಾರಂಭ ಸೇರಿದಂತೆ ದ್ವಿಪಕ್ಷೀಯ ವಿನಿಮಯವನ್ನು ಪುನಃಸ್ಥಾಪಿಸುವಲ್ಲಿ ಕೆಲವು ಪ್ರಗತಿಗಳಾಗಿವೆ ಎಂದು ವಿದೇಶಾಂಗ ಸಚಿವ ಹೇಳಿದರು.
ಭಾರತದ ಆಂತರಿಕ ವೈವಿಧ್ಯತೆ ಮತ್ತು ಅದು ಜಾಗತಿಕ ಗ್ರಹಿಕೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಪಾಶ್ಚಿಮಾತ್ಯರ ಟೀಕೆಯನ್ನು ತಳ್ಳಿಹಾಕಿದ ಜೈಶಂಕರ್, ಅದು ಹೆಚ್ಚು ಉತ್ಪ್ರೇಕ್ಷಿತವಾಗಿದೆ ಮತ್ತು ಕೆಲವೊಮ್ಮೆ ಸಂಪೂರ್ಣವಾಗಿ ಸುಳ್ಳಾಗಿರುತ್ತದೆ. ಧರ್ಮವು ನಮ್ಮ ಗುರುತಿನ ಒಂದು ಮುಖ ಮಾತ್ರ. ಅದಕ್ಕಾಗಿಯೇ ನಾನು ನಿಮ್ಮ ಪ್ರಶ್ನೆಯ ಪ್ರಮೇಯವನ್ನು ತಿರಸ್ಕರಿಸುತ್ತೇನೆ ಎಂದು ಅವರು ತಿಳಿಸಿದರು.