ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜಲ ಸಂರಕ್ಷಣಾ ಕಾಮಗಾರಿಗಳನ್ನು ಉತ್ತಮವಾಗಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಶಕ್ತಿ ಇಲಾಖೆ ನೀಡುವ ‘ಜಲ ಸಂಚಾಯ್, ಜನ ಭಾಗಿಧಾರಿ’ (ಜಿ.ಎಸ್.ಜೆ.ಬಿ) ರಾಷ್ಟ್ರ ಪ್ರಶಸ್ತಿಗೆ ಜಿಲ್ಲೆಯು ಭಾಜನವಾಗಿದೆ.
ನವದೆಹಲಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು, ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಉಪಸ್ಥಿತಿಯಲ್ಲಿ ನೀಡಿದ ಪ್ರಶಸ್ತಿಯನ್ನು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರು ಸ್ವೀಕರಿಸಿದರು.
ಜಿಲ್ಲೆಯಲ್ಲಿ ಜಲ ಮೂಲದ ಸಂರಕ್ಷಣೆಯಡಿ ಅಂತರ್ಜಲ ವೃದ್ಧಿಗಾಗಿ, ಜಲ ಸಂರಕ್ಷಣೆಗೆ ಅದ್ಯತೆ ನೀಡಲಾಗಿದ್ದು, ಮಳೆ ನೀರು ಸಂರಕ್ಷಣೆ ಕಾಮಗಾರಿ, ಕಂದಕ ಬದು, ಕೆರೆ ಹೂಳೆತ್ತುವುದು, ಕಟ್ಟೆ ಅಭಿವೃದ್ಧಿ, ಕಾಲುವೆ ಅಭಿವೃದ್ಧಿ, ಕಲ್ಯಾಣಿಗಳ ಅಭಿವೃದ್ಧಿ, ಚೆಕ್ ಡ್ಯಾಮ್ ನಿರ್ಮಾಣ, ಇಂಗು ಗುಂಡಿ ಸೇರಿದಂತೆ ಹಲವು ಕಾಮಗಾರಿಗಳಿಂದ ಅಂತರ್ಜಲ ಮಟ್ಟ ಹೆಚ್ಚಲು ಕಾರಣವಾಗಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ನರೇಗಾ ಯೋಜನೆಯಡಿ ಅಭಿಯಾನ ಕೈಗೊಂಡು 2024-25ನೇ ಸಾಲಿನಲ್ಲಿ 1063 ಗ್ರಾಮಗಳಲ್ಲಿ 7815 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳು ಪರಿಣಾಮಕಾರಿಯಾಗಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ರೂ. 25 ಲಕ್ಷ ನಗದು ಸೇರಿದಂತೆ ಈ ಪ್ರಶಸ್ತಿ ಲಭಿಸಿದೆ.

