ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನವೀಯತೆ ಮರೆತಿರುವ ದುಷ್ಟ ಕಾಂಗ್ರೆಸ್‌ಸರ್ಕಾರ ರಾಜ್ಯದಲ್ಲಿ ಅಮಾಯಕರ ಬಲಿ ಪಡೆಯುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಐವರು ಬಾಣಂತಿಯರು ಜೀವ ಕಳೆದುಕೊಂಡಿದ್ದಾರೆ. ಆದರೆ ಕಟುಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದಕ್ಕೂ ತನಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಬಾಣಂತಿಯರ ಪೈಕಿ ನಾಲ್ವರು ಸಾವಿಗೀಡಾದ ಬೆನ್ನಲ್ಲೇ ಬೀಮ್ಸ್‌ನಲ್ಲಿಯೂ ಮತ್ತೊಬ್ಬ ಬಾಣಂತಿಯ ಪ್ರಾಣ ಹೋಗಿದೆ. ಈ ಸರಣಿ ಸಾವಿಗೆ ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಜೆಡಿಎಸ್ ಆರೋಪಿಸಿದೆ.
ಖಾಸಗಿ ಕಂಪನಿಯೊಂದು ಪೂರೈಕೆ ಮಾಡಿರುವ ಔಷಧಿಯನ್ನು ಬಳಕೆ ಮಾಡದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸುತ್ತೋಲೆ ಹೊರಡಿಸಿತ್ತು. ಬಾಣಂತಿಯರ ಸರಣಿ ಸಾವಿಗೆ ಕಳಪೆ ಗುಣಮಟ್ಟದ ಔಷಧಿ ಕಾರಣ ಎಂಬ ಅನುಮಾನಗಳು ಮೂಡಿವೆ ಎಂದು ಜೆಡಿಎಸ್ ದೂರಿದೆ.
ಆದರೆ, ಸಿಎಂ ಸಿದ್ದರಾಮಯ್ಯ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬಾಣಂತಿಯರ ಸರಣಿ ಸಾವು ಪ್ರಕರಣದ ತನಿಖಾ ವರದಿಯನ್ನು ಮುಚ್ಚಿಟ್ಟು ಕಳ್ಳಾಟವಾಡುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಆರೋಗ್ಯ ಇಲಾಖೆಗೆ ಅನಾರೋಗ್ಯ ಹಿಡಿಸಿರುವ ಮಂತ್ರಿ ದಿನೇಶ್ ಗುಂಡೂರಾವ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಈ ಪ್ರಕರಣದ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.