ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಸಚಿವ ಜಮೀರ್ ಅಹಮದ್ ಖಾನ್, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೊರಗಡೆ ಫೈಟ್ ಮಾಡಿಕೊಂಡು ರಾಜ್ಯ ದೇಶದ ಗಮನ ಸೆಳೆದವರು. ಆದರೆ ಒಳಗಡೆ ಇಬ್ಬರೂ ಆತ್ಮೀಯ ಸ್ನೇಹಿತರಂತೆ ಕುಚುಕು ಕುಚುಕು ಆಟ ಶುರು ಮಾಡಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಕ್ಫ್ ಮಂಡಲಿ ರೈತರು, ದೇವಸ್ಥಾನ, ಮಠಗಳ ಜಮೀನುಗಳನ್ನು ಅಕ್ರಮವಾಗಿ ವಶಕ್ಕೆ ಪಡೆಯುತ್ತಿದೆ ಎಂದು ನಿತ್ಯ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ.
ಆದರೆ ಡಿಸೆಂಬರ್-17 ರಂದು ಯತ್ನಾಳ್ ಅವರು ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಗಮನ ಸೆಳೆದಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಜಮೀರ್ ಅಹಮ್ಮದ್ ಖಾನ್ ಕಚೇರಿಗೆ ಹೋಗಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯತ್ನಾಳ್ ಚರ್ಚೆ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಯತ್ನಾಳ್, ಸಚಿವರನ್ನು ಭೇಟಿಯಾದದ್ದು ಕೇವಲ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳಿಗೆ ಸಂಬಂಧಿಸಿದಂತೆ ಹೊರತು ಯಾವುದೇ ಚರ್ಚೆಗಲ್ಲ. ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನರ ಆಶೋತ್ತರವನ್ನು ಈಡೇರಿಸಲು ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.