ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ.
ಗಣಿಗಾರಿಕೆ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಹೈದರಾಬಾದ್ ಸಿಬಿಐ ಕೋರ್ಟ್, ಏಳು ವರ್ಷಗಳ ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಶಾಸಕ ಸ್ಥಾನ ಉಳಿಸಿಕೊಳ್ಳಲು ಶಿಕ್ಷೆ ಕಡಿಮೆ ಮಾಡಿ ಎಂದು ರೆಡ್ಡಿ ಅವರು ಕೋರ್ಟ್ ಮುಂದೆ ಅಂಗಲಾಚಿ ಬೇಡಿಕೊಂಡಿದ್ದರು. ಆದರೆ, ರೆಡ್ಡಿ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಈ ಕುರಿತು ಆದೇಶ ಹೊರಡಿಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸಿಬಿಐ ಕೋರ್ಟ್ ತೀರ್ಪು ಪ್ರಕಟವಾದ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ಶಾಸಕ ಸ್ಥಾನದಿಂದ ಜನಾರ್ದನ ರೆಡ್ಡಿ ಅವರನ್ನು ಮುಂದಿನ 6 ವರ್ಷಗಳ ಕಾಲ ಅನರ್ಹಗೊಳಿಸಿ ಕರ್ನಾಟಕ ವಿಧಾನಸಭೆ ಆದೇಶ ಹೊರಡಿಸಿದೆ. ಈ ಅನರ್ಹತೆ ಜನಾರ್ದನ ರೆಡ್ಡಿ ಶಿಕ್ಷೆ ಮುಗಿಸಿ ಬಿಡುಗಡೆಯಾಗುವವರೆಗೆ ಅಥವಾ ಈ ಶಿಕ್ಷೆಗೆ ಕೋರ್ಟ್ ತಡೆ ನೀಡುವವರೆಗೆ ಇರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನಿಮಯದ ಪ್ರಕಾರ ಯಾವುದೇ ಶಾಸಕ ಅಥವಾ ಸಂಸದ 2 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಜೈಲು ಶಿಕ್ಷೆಗೆ ಗುರಿಯಾದರೆ ಶಾಸಕ ಸ್ಥಾನ ರದ್ದಾಗಲಿದೆ. ಈಗ ರೆಡ್ಡಿ ಶಾಸಕ ಸ್ಥಾನವು ಅದರಂತೆ ಅನರ್ಹಗೊಂಡಿದೆ.
ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಕೋರ್ಟ್, ಅನುಮಾತಿ ಕೊಟ್ಟಿರಲಿಲ್ಲ. ಹೀಗಾಗಿ ರೆಡ್ಡಿ ಕೆಆರ್ಎಸ್ ಪಕ್ಷ ಕಟ್ಟಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.