ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ನೆರೆಹಾನಿ ಪ್ರದೇಶಗಳ ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜನತಾದಳ ಪಕ್ಷದ ವತಿಯಿಂದ ಹಮ್ಮಿಕೊಂಡ ರಾಜ್ಯ ಪ್ರವಾಸದ ಭಾಗವಾಗಿ ಸೋಮವಾರ ಕಲಬುರಗಿಯ ಎಪಿಎಂಸಿ ಯಾರ್ಡ್ ನಲ್ಲಿ ರೈತರೊಂದಿಗೆ ಸಂವಾದ ನಡೆಸಿ, ಅತಿವೃಷ್ಟಿಯಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ರೈತರ ಮೂಲಕವೇ ನೇರವಾಗಿ ಮಾಹಿತಿ ಪಡೆದು, ಸಂವಾದ ಉದ್ದೇಶಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಜನತಾದಳ ರೈತರ ಕಲ್ಯಾಣಕ್ಕಾಗಿ ಹಾಗೂ ರೈತಪರ ಚಿಂತನೆಗಳಿಗಾಗಿ ಹುಟ್ಟಿದ ಪಕ್ಷ. ನಮ್ಮ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರೈತನ ಮಗನಾಗಿ ನಾನು ಇಲ್ಲಿಗೆ ಬಂದಿದ್ದೇನೆ.
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ, ಕನಿಕರ ಎಳ್ಳಷ್ಟು ಇಲ್ಲ. ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಕೈ ತೊಳೆದುಕೊಂಡಿದ್ದಾರೆ. ಇನ್ನೂ ಕೃಷಿ ಸಚಿವರು ರಾಜ್ಯಕ್ಕೆ ಕೃಷಿ ಸಚಿವರೋ ಅಥವಾ ಅವರ ತಾಲ್ಲೂಕು , ಜಿಲ್ಲೆಗೆ ಮಾತ್ರ ಸಚಿವರರೋ ತಿಳಿಯುತ್ತಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಸರ್ಕಾರ 1.5 ಲಕ್ಷ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ ಎಂದು ಮಾಹಿತಿ ನೀಡಿದೆ.ವಾಸ್ತವದಲ್ಲಿ ರೈತರ ಪ್ರಕಾರ 100 ಕ್ಕೆ 100 ರಷ್ಟು ಬೆಳೆಗಳು ಹಾನಿಯಾಗಿವೆ. ಜಿಲ್ಲೆಯಲ್ಲಿ ತೊಗರಿ, ಉದ್ದು, ಹೆಸರು, ಸೋಯಾಬಿನ್ ಹಾಗೂ ಹತ್ತಿ ಬೆಳೆಹಾನಿಯಾಗಿದ್ದು, ಸರ್ಕಾರ ಶೀಘ್ರವಾಗಿ ಪ್ರತಿಯೊಬ್ಬ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ನಿಖಿಲ್ ಆಗ್ರಹಿಸಿದರು.
ಇದೇ ವೇಳೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕರೆ ಮಾಡಿ, ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ತಿಳಿಸಲಾಯಿತು. ಇದಕ್ಕೆ ರೈತರೊಂದಿಗೆ ದೂರವಾಣಿ ಮೂಲಕ ಕುಮಾರಸ್ವಾಮಿ ಅವರು ಮಾತನಾಡಿ ಶೀಘ್ರವಾಗಿ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ವಿಶೇಷ ಆರ್ಥಿಕ ನೆರವು ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಪಕ್ಷದ ಅಧ್ಯಕ್ಷ ಬಾಲರಾಜ್ ಗುತ್ತೇದಾರ, ಮಾಜಿ ಶಾಸಕರಾದ ರಾಜವೆಂಕಟಪ್ಪ ನಾಯಕ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಕೋರ್ ಕಮೀಟಿ ಸದಸ್ಯ ಬಸವರಾಜ್ ತಡಕಲ್, ಎಪಿಎಂಸಿ ಅಧ್ಯಕ್ಷ ಸಂತೋಷ, ಪ್ರಮುಖರಾದ ಶಿವಕುಮಾರ್ ನಾಟಿಕಾರ, ದೇವೇಗೌಡ ತೆಲ್ಲೂರ, ದಯಾನಂದ ಪಾಟೀಲ್ ಸೇರಿದಂತೆ ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.

