ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ಕಲಾವಿದರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಕಾಲ್ನಡಿಗೆ ಜಾತಾವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ವಿನಾಯಕ ನಗರದ ಸಂಘದ ಕಚೇರಿ ಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ಸರಿಸುಮಾರು ಐದುನೂರು ಜನ ಕಲಾವಿದರ ತಂಡ ಸುಮಾರು ಹತ್ತು ಕಿ.ಮೀ. ಕಾಲ್ನಡಿಗೆ ಯಲ್ಲಿ ತೆರಳಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಕಲಾವಿದರಿಗೆ ಸಹಾಯ- ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.
ಕಲಾವಿದರ ಹನ್ನೆರಡು ಬೇಡಿಕೆಗಳು ಹೀಗಿವೆ: :1.ಕಲಾವಿದರ ಮಾಸಾಶನಕ್ಕೆ ಅರ್ಜಿ ಹಾಕಲು ವಯೋಮಿತಿ 50ವರ್ಷ ನಿಗಧಿಪಡಿಸಬೇಕು. 2.ಕಲಾವಿದರು ಅರ್ಜಿಯನ್ನು ಹಾಕಿದ ಅದೇ ವರ್ಷದಲ್ಲಿ ಕಡತ ವಿಲೇವಾರಿ ಮಾಡ ಬೇಕು.3. ಕಲಾವಿದರ ಮಾಸಾಶನ ಐದು ಸಾವಿರ ರೂಗಳು ನಿಗಧಿ ಪಡಿಸಬೇಕು.
4. ಕಲಾವಿದರ ವಿಧವಾ ವೇತನ ಎರಡೂವರೆ ಸಾವಿರ ರೂ.ನಿಗಧಿಪಡಿಸ ಬೇಕು 5.ಕಲಾವಿದರ ಮಾಸಾಶನವನ್ನು ಪ್ರತಿ ತಿಂಗಳ ಹತ್ತನೇ ತಾರೀಖಿನ ಒಳಗಾಗಿ ಖಾತೆಗೆ ಜಮಾ ಮಾಡ ಬೇಕು.6.ಕಲಾವಿದರ ಆರೋಗ್ಯ ವಿಮೆ ಜಾರಿ ಗೊಳಿಸಬೇಕು.
7 ಕಲಾವಿದರ ಮಾಸಾಶನಕ್ಕೆ ಅರ್ಜಿ ಹಾಕಲು ತಹಶೀಲ್ದಾರರ ದೃಢೀಕರಣ ಪತ್ರವನ್ನು ರದ್ದುಗೊಳಿಸ ಬೇಕು. 8.ಕಲಾವಿದರ ಮಾಸಾಶನ ಬಿಡುಗಡೆಯಾದ ನಂತರ ತಹಶೀಲ್ದಾರ ರಿಂದ ದೃಢೀಕರಣದ ನಂತರವೇ ಇತರೆ ಮಾಸಾಶನಗಳನ್ನು ರದ್ದು ಗೊಳಿಸುವುದು.
9.ಕಲಾವಿದರಿಗೆ ಉಚಿತ ಬಸ್‌ಪಾಸ್ ನೀಡುವಂತೆ ಮತ್ತು10.ಕಲಾ ಸಂಘ, ಸಂಸ್ಥೆಗಳಿಗೆ ಶೀಘ್ರವೇ ಧನ ಸಹಾಯ ಬಿಡುಗಡೆ ಮಾಡುವುದು.11.ಎಲ್ಲಾ ಕಲಾ ವಿದರಿಗೆ ಗುರುತಿನ ಚೀಟಿಯನ್ನು ನೀಡುವುದು. 12.ಕಲಾವಿದರ ಅಂತ್ಯ ಕ್ರಿಯೆಗೆ ಹತ್ತುಸಾವಿರ ರೂಗಳು ಸಹಾಯಧನ ನೀಡ ಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕಾಲ್ನಡಿಗೆ ಪ್ರತಿಭಟನಾ ಜಾತಾದಲ್ಲಿ ಸಂಘದ ಪದಾಧಿಕಾರಿಗಳು ಸೇರಿದಂತೆ ತಾಲ್ಲೂಕು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಲಾವಿದರು ನೂರಾರು ಸಂಖ್ಯೆಯಲ್ಲಿ ಭಾಗವಹಿದ್ದರು.