ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಗಗೊಂಡನಹಳ್ಳಿಯ ಚಿತ್ರದುರ್ಗ ಶ್ರೀಜಗದ್ಗರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಕ್ಕೊಳಪಟ್ಟ ಶ್ರೀ ಗುರು ಚೆಲುವೆಸ್ವಾಮಿ ರಥೋತ್ಸವ ಮತ್ತು ದನಗಳ ಹಾಗೂ ಜಾನಪದ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದಾರೆ.
ಈ ಬಾರಿ ವಿಶೇಷವಾಗಿ ಇದರೊಂದಿಗೆ ಕುಸ್ತಿ ಪಂದ್ಯಾವಳಿಗಳು ಸೇರಿದಂತೆ ಇದೇ ತಿಂಗಳ ಫೆ. 5 ರಿಂದ 10 ನೇ ತಾರೀಖಿನವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಗುರು ಚೆಲುಮೆ ರುದ್ರಸ್ವಾಮಿಗಳವರ ಗದ್ದುಗೆ ಮಠದ ಟ್ರಸ್ಟ್ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಭಾರತ ದೇಶವು ಪುಣ್ಯ ಪುರುಷರಿಗೆ ಜನ್ಮ ನೀಡಿದೆ. ಬುದ್ಧ ,ಬಸವ, ಮಹಾವೀರ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಥಣಿಯ ಮುರುಘೇಂದ್ರ ಶಿವಯೋಗಿಗಳು, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗಳು ಇನ್ನೂ ಮುಂತಾದವರು ಮಹಾತ್ಮರಾಗಿ ಹುಟ್ಟಿ ಈ ಜಗಕೆ ಬೆಳಕನ್ನು ನೀಡಿದ್ದಾರೆ. ಅಂತಹವರಲ್ಲಿ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿ, ಜಾಜೂರು, ಅರವಿಗೊಂಡನಹಳ್ಳಿ ಹಾಗೂ ಹಾಲಿಗೊಂಡನಹಳ್ಳಿ ಗ್ರಾಮಗಳ ಆರಾಧ್ಯ ಶ್ರೀ ಚೆಲುಮೆ ರುದ್ರಸ್ವಾಮಿಗಳು ಒಬ್ಬರಾಗಿದ್ದಾರೆ.
ಶ್ರೀ ಚಿಲುಮೆರುದ್ರಸ್ವಾಮಿಗಳವರು ಒಬ್ಬ ಮಹಾನ್ ತಪಸ್ವಿಗಳು. ಅವರನ್ನು ಸ್ಮರಿಸಿ ಗದ್ದುಗೆ ದರ್ಶನ ಪಡೆದರೆ ಭಕ್ತಾದಿಗಳ ಸಂಕಷ್ಟಗಳು, ನೋವುಗಳು ದೂರವಾಗುತ್ತವೆ ಎನ್ನುದು ನಂಬಿಕೆ ಈ ಭಾಗದ ಸರ್ವ ಭಕ್ತಾದಿಗಳಲ್ಲಿದ್ದು ಶ್ರದ್ದಾ ಭಕ್ತಿಯಿಂದ ಆರಾಧಿಸುತ್ತಾರೆ.
ಶ್ರೀ ಗುರು ಚೆಲುಮೆರುದ್ರಸ್ವಾಮಿ ಗದ್ದುಗೆ ಮಠದ ಟ್ರಸ್ಟಿನ ಅಧ್ಯಕ್ಷ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ.ಸಿ ಕಳಸದ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ನಾಗಗೊಂಡನಹಳ್ಳಿ ಬಳಿ ಇರುವ ವೇದಾವತಿ ನದಿ ತೀರದಲ್ಲಿ ಬಯಲಾಗಿರುವ ಶ್ರೀ ಗುರು ಚೆಲುವೆ ರುದ್ರಸ್ವಾಮಿ ಗದ್ದುಗೆ ಮಠದ ಕ್ಷೇತ್ರದಲ್ಲಿ ನಡೆಯಲಿದೆ.
ಫೆ.5ರ ಬುಧವಾರ ಗಂಗಾ ಪೂಜೆ, ರಥಕ್ಕೆ ತೈಲಾಭಿಷೇಕ, ಕಳಸ ಸ್ಥಾಪನೆ, ಮೂರ್ತಿಯ ಗದ್ದುಗೆಗೆ ಆರೋಹಣ ಜಾಜೂರು ಗ್ರಾಮಸ್ಥರಿಂದ ನೆರವೇರಲಿದೆ.
ಫೆ-6 ರಂದು ಮಹಾರುದ್ರಭಿಷೇಕ ಹಾಲಿಗೊಂಡನಹಳ್ಳಿ ಗ್ರಾಮಸ್ಥರಿಂದ ನಡೆಯಲಿದೆ. 7 ರಂದು ಸಂಜೆ 5 ಗಂಟೆಯಿಂದ ಮಹಾ ರಥೋತ್ಸವ ನಾಗಗೊಂಡನಹಳ್ಳಿ ಗ್ರಾಮಸ್ಥರಿಂದ ನಡೆಯಲಿದೆ.
ಅದೇ ದಿನ ಸಂಜೆ 7 ಗಂಟೆಯಿಂದ ವಿವಿಧ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.8 ರಂದು ಸಂಜೆ ನಾಲ್ಕು ಗಂಟೆಗೆ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಅರವಿಗೊಂಡನಹಳ್ಳಿ ಗ್ರಾಮಸ್ಥರು ನಡೆಸಿಕೊಡಲಿದ್ದಾರೆ.
ಈ ಬಾರಿ ವಿಶೇಷವಾಗಿ ಭಾರತೀಯ ಶೈಲಿಯ ಚಿತ್ರದುರ್ಗ ಜಿಲ್ಲಾ ಕುಸ್ತಿ ಸಂಘ ಇವರ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಳಿಯನ್ನು ಫೆ.9 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಟ್ರಸ್ಟ್ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಏರ್ಪಡಿಸಲಾಗಿದೆ.
ಫೆ.10 ರಂದು ಸೋಮವಾರ ಸಮಾರೋಪ ಸಮಾರಂಭವು ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಹಾಗೂ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಜಾಜೂರು ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದು ಸಂಪನ್ನಗೊಳ್ಳಲಿದೆ.
ವಿಶೇಷ ಸೂಚನೆ: ಜಾತ್ರೆ ನಡೆಯುವ ಸ್ಥಳವು ನದಿ ತೀರವಾಗಿದ್ದು ನೀರು ನೆರಳಿನ ವ್ಯವಸ್ಥೆ ಇರುತ್ತದೆ. ಜಾತ್ರೆಯಲ್ಲಿ ಅಂಗಡಿ ಹೋಟೆಲ್ ಗಳಿಗೆ ಸುಂಕವಿರುತ್ತದೆ. ಜಾತ್ರೆಯಲ್ಲಿ ಶ್ರೀ ಸ್ವಾಮಿಯ ಮುಕ್ತಿ ದ್ವಜ, ಹೂವಿನ ಹಾರ ಹರಾಜು ಮಾಡಿದ ತಕ್ಷಣ ಸ್ಥಳದಲ್ಲಿ ಹಣವನ್ನು ಪಾವತಿ ಮಾಡಬೇಕು. ಈ ಭಾಗದ ಆರಾಧ್ಯ ದೈವ ಚಿಲುಮೆರುದ್ರಸ್ವಾಮಿಗಳವರ ಸ್ವಾಮಿಗಳು ನಡೆದಾಡಿದ ಪುಣ್ಯಕ್ಷೇತ್ರವಾಗಿದ್ದು.
ಈ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ತಾವು ಭಾಗಿಯಾಗುವುದರ ಜೊತೆಗೆ ತನು ಮನ ಧನ ನೀಡಿ ಸಹಕಾರ, ನೆರವು ನೀಡಬೇಕೆಂದು ಕಮಿಟಿಯ ಪದಾಧಿಕಾರಿಗಳು ಕೊರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಪಾಧ್ಯಕ್ಷ ಓಬಯ್ಯ 8951487653, ಕಾರ್ಯದರ್ಶಿ ಜೆ. ಅಶೋಕ್ 9980172992, ಸಹ ಕಾರ್ಯದರ್ಶಿ ಕೆಂಪೇಗೌಡ 8050652081, ಖಜಾಂಚಿ ಕೆ.ಎ. ರವೀಂದ್ರ 74 83 25 79 81, ಕೋಶಾಧ್ಯಕ್ಷ ಬಿ. ತಿಪ್ಪೇಸ್ವಾಮಿ 9902905721 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಅಂಗಡಿ ಮುಂಗಟ್ಟುಗಳನ್ನು ಹಾಕಿಕೊಳ್ಳುತ್ತಿದ್ದಾರೆ. ರಥೋತ್ಸವ ಕಟ್ಟುವ ಕೆಲಸ ನಡೆದಿದೆ. ಕುಸ್ತಿ ಅಖಡಾ ರಡಿ ಆಗುತ್ತಿದೆ. ದಾಸೋಹ ಭವನ, ಶೌಚಾಲಯ ವ್ಯವಸ್ಥೆ, ಸ್ವಚ್ಛತೆ ಇತರೆ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.