ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ಸ್ಥಾಪಿಸಿದ ಮೈಸೂರು ಜಿಲ್ಲೆ ಟಿ. ನರಸೀಪುರದ ಕೆಎಸ್ಐಸಿ ಫಿಲೇಚರ್ ಕಾರ್ಖಾನೆಯ 5 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಜನವಿರೋಧಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವುದಾಗಿ ರೇಷ್ಮೆ ಸಚಿವ ಟಿ.ವೆಂಕಟೇಶ್ ಅವರು ಸದನದಲ್ಲಿ ಉತ್ತರ ನೀಡಿದ್ದು, ಇದರಿಂದ ಕರ್ನಾಟಕದ ಅಸ್ಮಿತೆಯಾದ ಕೆಎಸ್ಐಸಿ ಮೈಸೂರು ಸಿಲ್ಕ್ ಉದ್ದಿಮೆ ಉಳಿಸುವ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಕ್ರೀಡಾಂಗಣದ ನೆಪದಲ್ಲಿ 100 ವರ್ಷಗಳಿಗೂ ಹಳೆಯದಾದ 500 ಮರಗಳನ್ನು ಕಡಿದು, ಶತಮಾನದ ರೇಷ್ಮೆ ಉದ್ಯಮವನ್ನು ಹಾಗೂ ಅಪರೂಪದ ಜೀವವೈವಿಧ್ಯತೆಯನ್ನು ನಾಶಮಾಡಲು ಮುಂದಾಗಿದ್ದ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದ ಕಾರ್ಖಾನೆಯ ಕಾರ್ಮಿಕರಿಗೆ ಬಿಜೆಪಿ ಬೆಂಬಲಿಸಿತ್ತು. ನಾನು ಖುದ್ದಾಗಿ ಕಾರ್ಖಾನೆಗೆ ಭೇಟಿ ನೀಡಿ ಪ್ರತಿಭಟನಾ ನಿರತ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೆ ಎಂದು ಅಶೋಕ್ ತಿಳಿಸಿದರು.
ನಮ್ಮ ಹೋರಾಟಕ್ಕೆ ಮಣಿದಿರುವ ಕಾಂಗ್ರೆಸ್ ಸರ್ಕಾರ , ಕನ್ನಡಿಗರ ಅಸ್ಮಿತೆಯಾದ ಕೆಎಸ್ಐಸಿ ಮೈಸೂರು ಸಿಲ್ಕ್ ಉದ್ಯಮವನ್ನು ಅಳಿಸಿ ಹಾಕುವ ದುಸ್ಸಾಹಸದಿಂದ ಹಿಂದೆ ಸರಿದಿರುವುದು ಸ್ವಾಗತಾರ್ಹ.
ಹಲವಾರು ದಶಕಗಳಿಂದ ತನ್ನ ಉತ್ಕೃಷ್ಟ ಗುಣಮಟ್ಟದ ರೇಷ್ಮೆ ಸೀರೆಗಳ ಮೂಲಕ ಜನಪ್ರಿಯತೆ ಕಾಯ್ದುಕೊಂಡು ಲಾಭದಾಯಕವಾಗಿರುವ ಒಂದು ಪಾರಂಪರಿಕ ಸಾರ್ವಜನಿಕ ಉದ್ದಿಮೆಯನ್ನು ಮುಚ್ಚಲು ಹೊರಟಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕಡೆಗೂ ಜ್ಞಾನೋದಯವಾಗಿದ್ದು ಸಮಾಧಾನದ ವಿಚಾರ. ಇನ್ನು ಮುಂದಾದರೂ ಇಂತಹ ಜನವಿರೋಧಿ, ನಾಡದ್ರೋಹಿ ಕೆಲಸಗಳಿಗೆ ಕೈಹಾಕದೆ ಉತ್ತಮ ಆಡಳಿತ ಕೊಡುವ ಕಡೆ ಗಮನ ಹರಸಲಿ ಎಂದು ಅಶೋಕ್ ಅವರು ಕಾಂಗ್ರೆಸ್ ಸರ್ಕಾರವನ್ನ ಆಗ್ರಹಿಸಿದ್ದಾರೆ.

