ಚಂದ್ರವಳ್ಳಿ ನ್ಯೂಸ್, ಶಿರಾ:
ಮೆಳೆಕೋಟೆ, ಹೇರೂರು ಮತ್ತು ನಾರಾಯಣಪುರ ಬ್ಯಾರೇಜ್ ಗಳು ಹೇಮಾವತಿ ನೀರಿನಿಂದ ತುಂಬಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಶಾಸಕರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಣೆ ಮಾಡಿದರು.
ನಂತರ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಜಯಚಂದ್ರ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ ಭದ್ರಾ, ಎತ್ತಿನಹೊಳೆ, ಹೇಮಾವತಿ ಹೀಗೆ ಹಲವು ನೀರಾವರಿ ಯೋಜನೆಗಳಿಂದ ಶಿರಾ ಕ್ಷೇತ್ರದ ಬಹುತೇಕ ಕೆರೆ ಕಟ್ಟೆಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಲಭ್ಯ ಇರುವ ನೀರನ್ನು ರೈತರು ಪೋಲು ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು. ಅಂತರ್ಜಲ ವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಮೆಳೆಕೋಟೆ, ಹೇರೂರು ಮತ್ತು ನಾರಾಯಣಪುರ ಗ್ರಾಮಗಳ ಸಾರ್ವಜನಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.