ಅಕ್ಟೋಬರ್-5 ರಿಂದ ಜಯದೇವ ಕ್ರೀಡಾ ಜಾತ್ರೆ-ಬಸವಕುಮಾರ ಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಯುವಕ್ರೀಡಾ ಪ್ರತಿಭಾ ಶೋಧ ಹಾಗೂ ಜಿಲ್ಲೆಯ ಕ್ರೀಡಾ ಚವಟಿಕೆಗಳನ್ನು ವಿಸ್ತರಿಸುವ ಮತ್ತು ಉತ್ತೇಜಿಸುವ ಆಶಯದೊಂದಿಗೆ ಅಕ್ಟೋಬರ್. 5 ರಿಂದ 7ರವರೆಗೆ ಜಯದೇವ ಕ್ರೀಡಾ ಜಾತ್ರೆ ನಡೆಯಲಿದೆ ಎಂದು ಮುರುಘಾಮಠ ಅಧೀನಕ್ಕೆ ಒಳಪಟ್ಟ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ತಿಳಿಸಿದರು.

ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಯದೇವ ಜಗದ್ಗುರುಗಳು ಕ್ರೀಡೆಗಳಿಗೆ ಸಂಬಂಧಿಸಿದ ಕೆಲಸಗಳು ಸೇರಿದಂತೆ ಎಲ್ಲ ರೀತಿಯ ಜನೋಪಯೋಗಿ ಕೆಲಸ ಕಾರ್ಯಗಳು ಸಾಕಷ್ಟಿವೆ. ಪೂಜ್ಯರು ಅನೇಕ ಸಂಘ ಸಂಸ್ಥೆಗಳಿಗೆ ದಾನ ಮಾಡಿರುತ್ತಾರೆ. ಜಯದೇವ ಜಗದ್ಗುರುಗಳ ಕಾಲವನ್ನು ಸುವರ್ಣ ಯುಗವೆಂದು ಕರೆಯುತ್ತಾರೆ ಎಂದು ಹೇಳಿದರು.

ಜಯದೇವ ಸ್ವಾಮೀಜಿಗಳ ಹೆಸರಿನಲ್ಲಿ ಕ್ರೀಡಾ ಜಾತ್ರೆ ಆಯೋಜಿಸಲಾಗಿದ್ದು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ೧೭ ವರ್ಷದೊಳಗಿನ ೮, ೯ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕಬಡ್ಡಿ, ಖೋಖೋ, ಹ್ಯಾಂಡ್‌ಬಾಲ್, ವಾಲಿಬಾಲ್ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಥ್ರೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿರುವವರನ್ನು ಆಹ್ವಾನಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಶ್ರೀಗಳ ಸತ್ಕಾರ್ಯಗಳನ್ನು ನಾಡಿಗೆ ತಿಳಿಸುವ ಕೆಲಸ ಮಾಡಲಾಗುವುದು.

ಅಕ್ಟೋಬರ್ ೫ ರ ಬೆಳಿಗ್ಗೆ ೧೦ಕ್ಕೆ ಜಯದೇವ ಕಪ್ ಕ್ರೀಡಾಕೂಟ ಅಂಗವಾಗಿ ಮೋಟಾರ್ ಬೈಕ್ ಜಾಥಾ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಸುಮಿತ ರಾಘವೇಂದ್ರ ಜಾಥಾ ಉದ್ಘಾಟಿಸುವರು.

ಜಾಥಾವು ಕನಕ ವೃತ್ತದಿಂದ ಪ್ರಾರಂಭವಾಗಿ ಬುರುಜನಹಟ್ಟಿ, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಪ್ರಧಾನ ಅಂಚೆ ಕಚೇರಿ ವೃತ್ತ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್, ಬಿ.ಡಿ.ರಸ್ತೆ, ಜೆ.ಎಂ.ಐ.ಟಿ. ವೃತ್ತದ ಮೂಲಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

ಮಧ್ಯಾಹ್ನ ೪ಗಂಟೆಗೆ ಜಯದೇವ ಕಪ್ ಪಂದ್ಯಾವಳಿ ಅಂಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಶ್ರೀ ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ ಪ್ರಾರಂಭವಾಗಲಿದ್ದು, ಸಂಸದ ಗೋವಿಂದ ಎಂ.ಕಾಳಜೋಳ ಅವರು ಪಥ ಸಂಚಲನ ಉದ್ಘಾಟಿಸುವರು.

ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನವು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೀಲಕಂಠೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಿ.ಡಿ.ರಸ್ತೆ ಮೂಲಕ ಹಳೆಯ ಮಾಧ್ಯಮಿಕ ಶಾಲಾ ಆವರಣದವರೆಗೆ ನಡೆಯಲಿದೆ ಎಂದರು.

ಸಂಜೆ ೬ ಗಂಟೆಗೆ ನಡೆಯುವ ಶ್ರೀ ಜಯದೇವ ಕಪ್ ಹೊನಲು ಬೆಳಕಿನ ಕ್ರೀಡಾಕೂಟವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸುವರು. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಸಮ್ಮುಖ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.

ದಿ. ೬. ರಂದು ಮಹಿಳಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳು ನಡೆಯಲಿವೆ. ದಿ. ೭ ರಂದು ಸಂಜೆ ೬.೦೦ ಗಂಟೆಗೆ ಜಯದೇವ ಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದ್ದು, ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮಿಗಳು, ಅಥಣಿ ಸಮ್ಮುಖ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು.

 ಮುಖ್ಯಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮುರುಳೀಧರ ಹಾಲಪ್ಪ, ಬಳ್ಳಾರಿ ಹನುಮಂತಪ್ಪ, ಡಾ. ವೈ. ರಾಮಪ್ಪ, ಉಮೇಶ ಕಾರಜೋಳ, ಎನ್.ಲೋಕೇಶ್‌ಗೌಡ, ಬಿ. ಜನಾರ್ದನಸ್ವಾಮಿ, ಜಿ.ಎಸ್. ಅನಿತ್, ಮಹಾಲಿಂಗಪ್ಪ ಕುಂಚಿಗನಾಳ್, ಡಾ. ಸಿ.ವಿ.ಹರೀಶ್ ಪಾಲ್ಗೊಳ್ಳುವರು ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಜಯದೇವ ಕ್ರೀಡಾ ಜಾತ್ರೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಊಟ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಕ್ರೀಡಾಕೂಟದಲ್ಲಿ ಶೇ.90 ರಷ್ಟು ಕಾರ್ಯ ಮುಗಿದೆ, ಉಳಿದ ಶೇ.೧೦ ರಷ್ಟು ಕಾರ್ಯ ಇಂದಿಗೆ ಮುಗಿಯಲಿದೆ. ಇದೊಂದು ಅರ್ಥ ಪೂರ್ಣವಾದ ಕ್ರೀಡಾಕೂಟವಾಗಿದೆ. ಅ. ೫ ರಿಂದ ೭ರವರೆಗೆ ನಡೆಯುವ ಕ್ರೀಡಾ ಜಾತ್ರೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕ್ರೀಡೆ ನಡೆಯಲಿದೆ ಎಂದು ತಿಳಿಸಿದರು.

ಕ್ರೀಡಾಕೂಟದ ಉಪಾಧ್ಯಕ್ಷ ಕೆ.ಸಿ.ನಾಗರಾಜ್ ಮಾತನಾಡಿ, ಜಯದೇವ ಕ್ರೀಡಾ ಜಾತ್ರೆಯಲ್ಲಿ ವಿವಿಧ ಕ್ರೀಡೆಗಳ ಸುಮಾರು ೫೮ ತಂಡಗಳು ಭಾಗವಹಿಸಲಿವೆ. ಕ್ರೀಡಾಕೂಟದ ಪ್ರಾರಂಭ ಹಾಗೂ ಮುಕ್ತಾಯ ದಿನದಂದು ಅರ್ಥ ಪೂರ್ಣವಾದ ವರ್ಣ ರಂಜಿತ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಜಯದೇವ ಶ್ರೀಗಳ ಜೀವನ ಚರಿತ್ರೆಯನ್ನು ಲೇಜರ್ ಮೂಲಕ ನೋಡುಗರಿಗೆ ನೀಡಲಾಗುತ್ತಿದೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಕ್ರೀಡಾಕೂಟದ ಸಮಿತಿ ಅಧ್ಯಕ್ಷ ಶ್ರೀರಾಮ್, ಹನೀಫ್, ಮಂಜುನಾಥ್ ಗೊಪ್ಪೆ, ಪ್ರಕಾಶ್ ರಾಮ್ ನಾಯ್ಕ್, ಸೈಯ್ಯದ್ ಖುದ್ದೂಸ್, ವಿರೇಂದ್ರ ಕುಮಾರ್, ಪೈಲಟ್ ನಾಗರಾಜ್, ಫ್ರಕೃದ್ದಿನ್, ಮಂಜುನಾಥ್, ಷಫಿವುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು. 

 

 

 

- Advertisement -  - Advertisement -  - Advertisement - 
Share This Article
error: Content is protected !!
";