ಮಹಾನ್ ನಾಯಕರ ಜಯಂತಿ ಆಚರಣೆಗಳು ಕೇವಲ ಫೋಟೋ ಸುದ್ದಿಗೆ ಸೀಮಿತ!!?

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಾಡಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ರಾಷ್ಟ್ರೀಯ ಹಬ್ಬಗಳು, ರಾಷ್ಟ್ರ ನಾಯಕರ ಜಯಂತಿಗಳ ಆಚರಣೆಗಳು ಶಾಲಾ ಕಾಲೇಜು ಹಾಗೂ ಸರ್ಕಾರಿ ಎಲ್ಲಾ ಇಲಾಖೆಗಳಿಗೂ ಕಡ್ಡಾಯವಾಗಿದ್ದರೂ ಸಹ ಅವು ಕೇವಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ಸೀಮಿತವಾಗಿದೆ.

ಏಕೆಂದರೆ ಇತ್ತೀಚಿಗೆ ವಾಲ್ಮೀಕಿ ಜಯಂತಿಯ ದಿನ ನಾನು ಒಬ್ಬ ಕಾಲೇಜು ವಿದ್ಯಾರ್ಥಿಯನ್ನು ಕೇಳಿದೆ “ಯಾಕೆ ಇಂದು ಕಾಲೇಜು ಇಲ್ಲವಾ, ಹೋಗಿಲ್ವಾ ? ಎಂದು ಅದಕ್ಕೆ ಅವನು “ಸರ್ ಇಂದು ಸರ್ಕಾರಿ ರಜೆ ಸರ್, ವಾಲ್ಮೀಕಿ ಜಯಂತಿಯನ್ನು ಉಪನ್ಯಾಸಕರುಗಳು ಮಾತ್ರ ಆಚರಿಸುತ್ತಾರೆ” ಎಂದು ಉತ್ತರಿಸಿದ.

- Advertisement - 

ರಾಜ್ಯೋತ್ಸವದ ದಿನ ಒಬ್ಬ ವಿದ್ಯಾರ್ಥಿ ಹೇಳಿದ ಸಾರ್ ಇಂದು ನಮ್ಮ ಕಾಲೇಜಿನಲ್ಲಿ NEET, KCET ವಿಶೇಷ ತರಗತಿಗಳು ನಡೆದವು ಎಂದು. ಒಂದು ಹಂತದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಹೊರೆ, ಮತ್ತೊಂದು ಕಡೆ ರಜೆಯ ಮಜಾ.

ಕಾಲೇಜುಗಳಲ್ಲಿ ಈ ಆಚರಣೆಗಳು ಕೇವಲ ಫೋಟೋ ತೆಗೆದುಕೊಂಡು ದಾಖಲಿಸಿಕೊಳ್ಳಲು ಮಾತ್ರ ಎನಿಸುವೆ. ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳು ರಾಷ್ಟ್ರೀಯ ಹಬ್ಬಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ, ಚರ್ಚಾ, ಚಿತ್ರಕಲೆ ಹಾಗೂ ಇತರೆ ಸ್ಪರ್ಧೆಗಳನ್ನು ಆಯೋಜಿಸಲು ಸೂಚನೆ ನೀಡಿದೆ. ಆದರೂ ಸಹ ಈ ಸೂಚನೆಗಳನ್ನು ಕೆಲ ಖಾಸಗಿ ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಉದಾಸೀನ ಮಾಡುತ್ತಿವೆ.

- Advertisement - 

ಇಂದಿನ ಶೈಕ್ಷಣಿಕ ಸಂಸ್ಥೆಗಳು ಕೇವಲ ಪಠ್ಯಕ್ರಮಕ್ಕೆ ಒತ್ತು ನೀಡಿ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಕೊಡುತ್ತಿಲ್ಲ ಎಂಬುದು ವಿಪರ್ಯಾಸ ಏಕೆಂದರೆ ಒಂದು ಅವಧಿಯನ್ನು ಮಕ್ಕಳ ಆಟಕ್ಕೂ ಸಹ ಮೀಸಲಿಡುವುದಿಲ್ಲವೆಂಬ ದೂರು ಇದೆ. ಇದು ಹೀಗೆ ಮುಂದುವರೆದರೆ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಾರೆ. ಶಿಕ್ಷಣವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕಾರಿಯಾಗಿರಬೇಕು.

ಇಂದಿನ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ತಾಂತ್ರಿಕ ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬ ದ ದಿನಗಳನ್ನು ರಜಾದಿನಗಳೆಂದು ಪರಿಗಣಿಸುತ್ತಾರೆ. ಇವೆಲ್ಲವುಗಳ ಪರಿಣಾಮದಿಂದಾಗಿ ಇಂದಿನ ಯುವಕರಲ್ಲಿ ಮಾತುಗಾರಿಕೆ, ವಾಕ್ಚಾತುರ್ಯ, ನಾಯಕತ್ವದ ಗುಣಗಳು ಕಾಣೆಯಾಗಿವೆ. ಸ್ವಾಮಿ ವಿವೇಕಾನಂದರ ಪ್ರಕಾರ ಜವಾಬ್ದಾರಿಯುತ ನಾಗರೀಕರನ್ನು ಸೃಷ್ಟಿ ಮಾಡುವುದೇ ಕ್ಷಣದ ಮೂಲ ಉದ್ದೇಶ. ಆದರೆ ಇಂದಿನ ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದೇ ಮೂಲ ಉದ್ದೇಶವಾಗಿದೆ.  ನಮ್ಮ ರಾಷ್ಟ್ರ ನಾಯಕರ, ಸ್ವತಂತ್ರ ಹೋರಾಟಗಾರರ, ಕವಿ ಸಾಹಿತಿಗಳ ಕನಿಷ್ಠ ಮಾಹಿತಿಯನ್ನು ಯುವ ಜನಾಂಗ ಮರೆತು ಬದುಕುತ್ತಿರುವುದು ದುರಂತ.

ನಗರದ ಪ್ರತಿ ವಾರ್ಡ್ಗಳಲ್ಲಿ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳನ್ನು ತೆರೆಯುವುದರಿಂದ, ಕನ್ನಡ ಪುಸ್ತಕಗಳಿಗೆ ಹೆಚ್ಚಿನ ರಿಯಾಯಿತಿ ಕೊಡುವುದರಿಂದ, ವಿಚಾರ ಸಂಕೀರ್ಣ, ವಿಚಾರ ಕುಮ್ಮಟ, ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನ ಈ ರೀತಿಯ ಸಮಾರಂಭಗಳಲ್ಲಿ ಸಾರ್ವಜನಿಕರಿಗೆ ಅವಕಾಶ ಕೊಡುವುದರಿಂದ ಜನರಲ್ಲಿ ಸಾಹಿತ್ಯ ಮತ್ತು ಪುಸ್ತಕಗಳ ಸ್ವಲ್ಪಮಟ್ಟಿನ ಆಸಕ್ತಿ ಹೆಚ್ಚಿಸಬಹುದು.

ಕನ್ನಡ ಮತ್ತು ಸಂಸ್ಕೃತಿ ಯಾಕೆಯೂ ಪ್ರಸಕ್ತ 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು ಸಾಹಿತ್ಯ, ರಂಗಭೂಮಿ, ಸಂಗೀತ, ಕ್ರೀಡೆ, ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಇದಕ್ಕೆ ಅಭಿನಂದನೆಗಳು.

ಇದೇ ರೀತಿಯಲ್ಲಿ ಗ್ರಾಮೀಣ ಭಾಗದ ಹೆಚ್ಚಿನ ಜಾನಪದ ಕಲೆಗಳನ್ನು ಕಲಾವಿದರನ್ನುರಂಗಕರ್ಮಿಗಳನ್ನು, ತಲೆಮಾರುಗಳಿಂದ ತಮ್ಮ ಕುಲ ಕಸುಬುಗಳನ್ನು ಉಳಿಸಿಕೊಂಡು ಮುಂದುವರೆಸುತ್ತಿರುವವರನ್ನು ಗುರುತಿಸಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಗೌರವಿಸಿದರೆ, ನಮ್ಮ ನಾಡು, ನುಡಿ, ಸಂಸ್ಕೃತಿ, ಜಾನಪದ ಕಲೆಗಳು ಮುಂದಿನ ಪೀಳಿಗೆಗೆ ನಿರಂತತೆ ಇರುತ್ತವೆ. ಇಲ್ಲವಾದಲ್ಲಿ ಇವುಗಳನ್ನೆಲ್ಲ ಕೇವಲ ಪುಸ್ತಕ ಮತ್ತು ಕಾದಂಬರಿಗಳಲ್ಲಿ ಮಾತ್ರ ಓದಲು ಸಾಧ್ಯ.

ಸಭೆ ಸಮಾರಂಭಗಳಲ್ಲಿ, ಮೆರವಣಿಗೆಗಳಲ್ಲಿ ಕರ್ಕಶ ಡಿಜೆ ಶಬ್ದದ ಕುಣಿತಗಳನ್ನು ತಡೆದು ಜಾನಪದ ಕಲೆಗಳಿಗೆ ಅವಕಾಶ ಕೊಟ್ಟರೆ ಕಲಾವಿದರಿಗೂ ಒಂದು ಬೆಲೆ ಸಿಗುತ್ತದೆ ಹಾಗೂ ಕಲೆಯು ಮುಂದುವರೆಯುತ್ತದೆ. ಡಿಜೆ ಶಬ್ದಗಳಿಂದ ಆಗುವ ಅಡ್ಡ ಪರಿಣಾಮಗಳನ್ನು ಸಹ ತಪ್ಪಿಸಬಹುದು.

ರಾಷ್ಟ್ರೀಯ ಹಬ್ಬಗಳ ಆಚರಣೆಗಳು ಕೇವಲ ವೇದಿಕೆಗಳಿಗೆ ಮತ್ತು ದಾಖಲೆಗಳಿಗೆ ಮಾತ್ರ ಸೀಮಿತವಾಗದೆ ಸರಳವಾಗಿದ್ದರೂ ಸಹ ಮೌಲ್ಯಗಳನ್ನು ಉಳಿಸಿ ಬೆಳೆಸುವಂತೆ ಇರಬೇಕು.
ಲೇಖನ: ವೇಣುಕುಮಾರ್. ಎಂ, ಭರಂಪುರ. ಹಿರಿಯೂರು.

 

Share This Article
error: Content is protected !!
";