ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಕಲ್ಯಾಣಕ್ಕಾಗಿ ಶೇ.3ರ ಬಡ್ಡಿ ದರದಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಸೇರಿದಂತೆ ಭೂ ಅಭಿವೃದ್ಧಿ ಸಾಲ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಎಸ್.ಸಾದತ್ ವುಲ್ಲಾ ಹೇಳಿದರು.
ಇಲ್ಲಿನ ಸಂಘದ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕುರಿ, ಮೇಕೆ ಸಾಕಾಣಿಕೆ ಸೇರಿದಂತೆ ವಿವಿಧ ಕೃಷಿ ಯೋಜಿತ ಸಾಲಗಳಿಗೂ ಶೇ.3ರಂತೆ ಸಾಲ ನೀಡಲಾಗುತ್ತದೆ. ಇದಲ್ಲದೆ ಸರ್ಕಾರದ ಮಾರ್ಗಸೂಚಿ ಪ್ರಕಾರ 5 ಲಕ್ಷ ರೂ.ತನಕ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ರೈತರಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಷೇರುದಾರ ರೈತರಿಗೆ ಮಾತ್ರ ಸಾಲ ನೀಡಲಾಗುತ್ತದೆ. ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಸಂಘಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧ್ಯಕ್ಷರು ತಿಳಿಸಿದರು.
ಜೆಸಿಬಿ, ಟ್ರ್ಯಾಕ್ಟರ್ ಸಾಲ ಪಡೆಯಬೇಕಾದರೆ ರೈತರ ಹೆಸರಿನಲ್ಲಿ ಕನಿಷ್ಠ 10 ಎಕರೆ ಜಮೀನು ಇರಬೇಕು. ಬ್ಯಾಂಕುಗಳು ಸಾಲ ನೀಡಲು ಷರತ್ತುಗಳು, ಮಾನದಂಡಗಳನ್ನು ಅನುಸರಿಸಿ ಎಲ್ಲರಿಗೂ ಏಕಪ್ರಕಾರವಾದ ಸಾಲ ನೀಡಲಾಗುತ್ತದೆ. ಸಾಲ ಪಡೆದ ನಂತರ ಪ್ರತಿ 6 ತಿಂಗಳಿಗೊಮ್ಮೆ ಕಂತು ಕಟ್ಟಬೇಕು. ಇಲ್ಲವಾದರೆ ಇದೇ ಸಾಲ ಶೇ.3ರ ಬದಲಿಗೆ ಶೇ.13 ರಷ್ಟು ಆಗಲಿದೆ ಎಂದು ಸೂಪರ್ ವೈಸರ್ ಶಶಿಧರ್ ತಿಳಿಸಿ ಇದರ ಪ್ರಯೋಜನವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಆಕ್ಷೇಪ- 60 ವರ್ಷಗಳ ನಂತರ ಯಾವುದೇ ರೈತರಿಗೆ ಕೆಸಿಸಿ ಸಾಲ ಸೇರಿದಂತೆ ಭೂ ಅಭಿವೃದ್ಧಿ ಸಾಲ, ಜೆಸಿಬಿ, ಟ್ರ್ಯಾಕ್ಟರ್ ಸಾಲ ನೀಡಲು ಬರುವುದಿಲ್ಲ ಎನ್ನುವ ಅವೈಜ್ಞಾನಿಕ ತೀರ್ಮಾನಕ್ಕೆ ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿ.ಹೆಂಜಾರಪ್ಪ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿ, ಯಾವುದೇ ವಯೋ ಮಿತಿ ಇಲ್ಲದೆ ಎಲ್ಲ ರೈತರಿಗೂ ಕಡ್ಡಾಯವಾಗಿ ಶೂನ್ಯ ಬಡ್ಡಿದರದಲ್ಲಿ ಸಾಲ ಸೇರಿದಂತೆ ಭೂ ಅಭಿವೃದ್ಧಿ ಸಾಲಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ನಮ್ಮ ಸಂಘದಿಂದ ಒಂದು ನಡಾವಳಿ ಮಾಡಿ ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಇಲಾಖೆಗೆ ಕಳುಹಿಸಬೇಕು ಎಂದು ಸೂಚಿಸಿದಾಗ ಇತರೆ ನಿರ್ದೇಶಕರು ಬೆಂಬಲ ವ್ಯಕ್ತಪಡಿಸಿ ನಡಾವಳಿ ಮಾಡಿ ಇಂದೇ ಕಳುಹಿಸಿ ಎಂದು ನಿರ್ದೇಶಕರಾದ ಎಂ.ಡಿ ಸಣ್ಣಪ್ಪ, ಸುಬ್ರಮಣಿ ತಾಕೀತು ಮಾಡಿದರು.
ಸಂಘವನ್ನು ಬಲಿಷ್ಠ ಮಾಡಬೇಕಾದರೆ ರೈತರಿಗೆ ಷೇರುಗಳನ್ನು ನೀಡಬೇಕು. 1150 ರೂ.ಷೇರು ಮೊತ್ತದೊಂದಿಗೆ ಠೇವಣಿ ಪಡೆದು ಹೊಸ ಷೇರುಗಳನ್ನು ರೈತರಿಗೆ ನೀಡಿದರೆ ಇದರಿಂದ ಸಾಕಷ್ಟು ಸಂಘಕ್ಕೆ ಅನುಕೂಲವಾಗಲಿದೆ ಎಂದು ಹೆಂಜಾರಪ್ಪ ತಿಳಿಸಿದರು.
179 ರೈತ ಫಲಾನುಭವಿಗಳಿಗೆ 1.84 ಕೋಟಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಶೂನ್ಯ ಬಡ್ಡಿದರದ ಸಾಲದಲ್ಲಿ 9.30 ಲಕ್ಷ ಸುಸ್ತಿ ಸಾಲ ಇದೆ. ಈ ಸಾಲ ಸೇರಿದಂತೆ ಭೂ ಅಭಿವೃದ್ಧಿ ಸಾಲ ಪಡೆದ ರೈತರೊಬ್ಬರ ಸಾಲವೂ ಸುಸ್ತಿಯಾಗಿದೆ. ಹಾಗಾಗಿ ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಘದ ಕಾರ್ಯದರ್ಶಿ ಯಶವಂತ್ ತಿಳಿಸಿದರು.
ಸಂಘ ನಿರ್ದೇಶಕ ಪ್ಯಾರೇಜಾನ್ ಅವರು ಮೆಕ್ಕಾ ಮದೀನ ಪ್ರವಾಸ ಕೈಗೊಂಡಿರುವುದರಿಂದ ಸಂಘದಲ್ಲಿ ಅವರಿಗೆ ಸನ್ಮಾನಿಸಿ ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ನಿರ್ದೇಶಕರು ಆರೈಸಿದರು.
ಕಳೆದ ಮಾರ್ಚ್-9 ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರಿಗೆ ಚುನಾವಣಾ ಪ್ರಮಾಣ ಪತ್ರಗಳನ್ನು ಸಂಘದ ಸೂಪರ್ ವೈಸರ್ ಶಶಿಧರ್ ವಿತರಣೆ ಮಾಡಿದರು.
ಉಪಾಧ್ಯಕ್ಷ ಪ್ರಕಾಶ್, ನಿರ್ದೇಶಕರಾದ, ಎಂ.ಡಿ ಸಣ್ಣಪ್ಪ, ಸುಬ್ರಮಣಿ, ಮತ್ತೊಬ್ಬ ಸುಬ್ರಮಣಿ, ಗುರುಸ್ವಾಮಿ, ಪ್ಯಾರೇಜಾನ್, ಗೌರಮ್ಮ, ನಾಗರತ್ನಮ್ಮ ಉಪಸ್ಥಿತರಿದ್ದರು.