ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾತ್ಯಾತೀತ ಜನತಾದಳದ ಸನ್ಮಾನ್ಯ ಗೋಸುಂಬೆಗಳೇ, ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ನಮ್ಮ ಸರ್ಕಾರ, ಅದರಲ್ಲೂ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬದ್ಧರಾಗಿದ್ದಾರೆ. ಅದಕ್ಕಾಗಿಯೇ ಸರ್ಕಾರದ ವತಿಯಿಂದ ಕಾನೂನು ಹೋರಾಟ ಮುಂದುವರೆಸುತ್ತಿದ್ದೇವೆ ಎಂದು ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಚುನಾವಣೆ ಸಮಯದಲ್ಲಿ ನನ್ನನ್ನು ಗೆಲ್ಲಿಸಿದರೆ ಮೇಕೆದಾಟು ಯೋಜನೆಗೆ ಮೋದಿ ಅವರಿಂದ ಕೇವಲ 5 ನಿಮಿಷದಲ್ಲಿ ಅನುಮೋದನೆ ಕೊಡಿಸುತ್ತೇನೆ ಎಂದು ಬೊಗಳೆ ಬಿಟ್ಟು, ಕಣ್ಣೀರು ಸುರಿಸಿದ್ದ ಮಹಾನುಭಾವ ನಿಮ್ಮ ಯೂಟರ್ನ್ ಸ್ವಾಮಿಯೇ ಅಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಚುನಾವಣೆ ಇದ್ದಾಗ ಮಾತ್ರ ಮಣ್ಣಿನ ಮಕ್ಕಳ ವೇಷ ತೊಡುವ ಜೆಡಿಎಸ್ ಡೋಂಗಿತನ ಈಗಾಗಲೇ ಜನರಿಗೆ ಅರ್ಥವಾಗಿದೆ.
ಚುನಾವಣಾ ಪೂರ್ವದಲ್ಲಿ ಜನತೆಗೆ ಕೊಟ್ಟ ಮಾತಿನಂತೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಮೊದಲು ಪ್ರಧಾನಿಗಳಿಂದ ಯೋಜನೆಗೆ ಅನುಮೋದನೆ ಕೊಡಿಸಿ ತಾಕತ್ತು ಪ್ರದರ್ಶಿಸಲಿ! ತದನಂತರ ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರ ಅಣೆಕಟ್ಟು ನಿರ್ಮಿಸಿ ಧಮ್ಮು ತಾಕತ್ತು ಪ್ರದರ್ಶಿಸಲಿದೆ ಎಂದು ಕಾಂಗ್ರೆಸ್ ಆಗ್ರಹ ಮಾಡಿದೆ.
ಹಾಗೆಯೇ, ಕಳಾಸ ಬಂಡೂರಿ ಯೋಜನೆ ವಿಚಾರದಲ್ಲಿ ನ್ಯಾಯಾಲಯದ ಆದೇಶವಿದ್ದರೂ ಮೋದಿ ಸರ್ಕಾರದಿಂದ ಅನುಮತಿ ಕೊಡಿಸಲು ಸಾಧ್ಯವಾಗಿಲ್ಲ ಯಾಕೆ? ಅಲ್ಲಿ ನಿಮ್ಮ ಧಮ್ಮು ತಾಕತ್ತು ಪ್ರದರ್ಶಿಸುತ್ತಿಲ್ಲ ಯಾಕೆ? ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲಿನ ಅನ್ಯಾಯ, ಅನುದಾನ ತಾರತಮ್ಯ ನಿರಂತರವಾಗಿದ್ದರೂ ಅದರ ವಿರುದ್ಧ ತುಟಿ ಬಿಚ್ಚದ ನಿಮ್ಮ ಧಮ್ಮು, ತಾಕತ್ತು ಎಲ್ಲರಿಗೂ ಗೊತ್ತಿದೆ.
ಅಂದಹಾಗೆ ನಿಮ್ಮ ನಾಯಕ ತಾಜ್ ವೆಸ್ಟ್ ಎಂಡ್‌ನಲ್ಲಿ ತೋರಿಸುವ ಧಮ್ಮು ತಾಕತ್ತನ್ನು ಸಂಸತ್ತಿನಲ್ಲಿ ತೋರಿಸಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಲಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.