ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಡಿಎಸ್ ಪಕ್ಷದಲ್ಲಿ ಸದ್ಯ ಬೂತ್ ಮಟ್ಟದಿಂದ ಪಕ್ಷ ಕಟ್ಟುವ ಕಟ್ಟಾಳು ಇಲ್ಲ. ಮೂಲ ಜೆಡಿಎಸ್ ಕಾರ್ಯಕರ್ತರು ಯಾವ ಪಕ್ಷದ ಕದ ತಟ್ಟಿಲ್ಲ, ನಾವು ಒಂದು ರೀತಿ ಬ್ರ್ಯಾಂಡ್ ಆಗಿದ್ದೇವೆ. ನಮ್ಮ ತಂದೆ ಕಾಲದಿಂದಲೂ ಜೆಡಿಎಸ್ ಪಕ್ಷ ಬಿಟ್ಟ ಬೇರೆ ಪಕ್ಷಕ್ಕೆ ಮತ ಹಾಕಿಲ್ಲ, ಆದರೆ ನಮ್ಮಂಥ ನಿಷ್ಠಾವಂತ ಕಾರ್ಯಕರ್ತರನ್ನು ಜೆಡಿಎಸ್ ತಾಲೂಕು ನಾಯಕರು ಗುರುತಿಸುತ್ತಿಲ್ಲ ಎನ್ನುವ ನೋವನ್ನು ವಿಶ್ರಾಂತ ಬ್ಯಾಂಕ್ ವ್ಯವಸ್ಥಾಪಕ ಹೆಚ್.ಜಿ.ಗುಂಡಯ್ಯ ತಮ್ಮ ನೋವು ಹೊರಹಾಕಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ತಂದೆ ಊರಗಳ ಹೆಚ್.ವಿ ಗುಣ್ಣಯ್ಯ ಅವರು ತನ್ನ ಕೊನೆ ಉಸಿರು ಇರೋತನಕ ಜನತಾ ಪರಿವಾರ ಬಿಟ್ಟು ಬೇರೆ ಪಕ್ಷದತ್ತ ಮುಖ ಮಾಡಲಿಲ್ಲ. ನಮ್ಮ ತಂದೆ ಅವರು ಹಾಕಿಕೊಟ್ಟ ದಾರಿಯಲ್ಲೇ ನಾವು ನಡೆಯುತ್ತೇವೆ. ಅದೇ ಜನತಾ ಪರಿವಾರದ ರಕ್ತ ನಮ್ಮ ಮೈಯಲ್ಲಿ ಹರಿಯುತ್ತಿದೆ. ನಾವು ಪಕ್ಷಕ್ಕೆ ಪ್ರಮಾಣಿಕವಾಗಿ ದುಡಿಯುತ್ತೇವೆ ಎಂದರೂ ನಮ್ಮನ್ನ ಗುರುತಿಸುವಂತೆ ತಾಲೂಕು ಜೆಡಿಎಸ್ ನಾಯಕರಿಲ್ಲ ಎಂದು ಗುಂಡಯ್ಯ ಬೇಸರ ವ್ಯಕ್ತಪಡಿಸಿದರು.
ಇಂದಿಗೂ ನಮ್ಮ ತಂದೆಯಾಗಲಿ, ನಾವಾಗಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿರುವಂತ ಅಭ್ಯರ್ಥಿಗಳಿಂದ ಒಂದು ರೂಪಾಯಿ ಪಡೆದಿಲ್ಲ. ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ನಮ್ಮನ್ನ ಯಾರು ಗುರುತಿಸದಿದ್ದರೂ ಮುಂದೆಯೂ ಜೆಡಿಎಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ಇನ್ನೂ ಹತ್ತಲ್ಲ ಐವತ್ತು ಸಲ ಜೆಡಿಎಸ್ ಸೋತರು ನಾವು ಎದೆಗುಂದುವುದಿಲ್ಲ ಎಂದು ಆತ್ಮ ವಿಶ್ವಾಸದಿಂದ ಗುಂಡಯ್ಯ ಹೇಳಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಕಾಯಂ ಆಗಿ ಕೆ.ಹೆಚ್.ರಂಗನಾಥ್ ಸ್ಪರ್ಧಿಸಿದರೆ ಜೆಡಿಎಸ್ ಪಕ್ಷದಿಂದ ಡಿ.ಮಂಜುನಾಥ್ ಕಾಯಂ ಆಗಿ ಸ್ಪರ್ಧಿಸುತ್ತಿದ್ದರು. ಕ್ಷೇತ್ರ ವಿಂಗಡಣೆಯಲ್ಲಿ ಮೀಸಲಿಂದ ಸಾಮಾನ್ಯ ಕ್ಷೇತ್ರವಾಗಿ ಹಿರಿಯೂರು ಹೊರಹೊಮ್ಮಿದ ಮೇಲೆ ಮತದಾರರು ಹಣದ ಹಿಂದೆ ಓಡಲು ಪ್ರರಂಭಿಸಿದರು. ಅಲ್ಲಿಯ ತನಕ ಬರೀ ಕಾಫಿ, ತಿಂಡಿಯಲ್ಲೇ ಚುನಾವಣೆ ನಡೆದು ಹೋಗುತ್ತಿತ್ತು. ಆದರೆ ಇಂದು ಕೋಟ್ಯಂತರ ರೂ.ಬೇಕಾಗಿರುವುದು ವಿಪರ್ಯಾಸವೇ ಸರಿ ಎಂದು ಸ್ಮರಿಸಿದರು.
ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಹೋದರೆ ಯಾರೂ ಸ್ಪಂದಿಸುವುದಿಲ್ಲ. ಕೊಬ್ಬಿದ ಟಗರು ಬಂತೆಂದು ಸಿಕ್ಕ ಸಿಕ್ಕ ಕಡೆ ಕೊಯ್ದು ತಿನ್ನುತ್ತಾರೆ. ಅದರ ಬದಲು ಇನ್ನೂ ಎರಡೂವರೆ ವರ್ಷವಿದೆ. ಇಂದಿನಿಂದಲೇ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಕ್ಷೇತ್ರದ ಎಲ್ಲ ಊರುಗಳಿಗೆ ಹೋಗಿ ಮತದಾರರನ್ನು ಸ್ನೇಹಿತರಂತೆ ಮಾತನಾಡಿಸುವ ಕೆಲಸ ಮಾಡಬೇಕು. ಆದರೆ ಈ ಕೆಲಸವನ್ನ ಯಾವೊಬ್ಬ ನಾಯಕರು ಮಾಡುತ್ತಿಲ್ಲದಿರುವುದು ವಿಪರ್ಯಾಸವಾಗಿದೆ ಎಂದು ಗುಂಡಯ್ಯ ನೋವು ತೋಡಿಕೊಂಡರು.
ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವಂತೆ ಅಭ್ಯರ್ಥಿಗಳು ಕಡ್ಡಾಯವಾಗಿ ಅಹಿಂದ ಮತಗಳನ್ನು ಸೆಳೆಯುವ ಕಡೆ ಗಮನ ಹರಿಸಬೇಕು. ಆದರೆ ಅದಾಗುತ್ತಿಲ್ಲ. ಕೇವಲ ಗುಬ್ಬಚ್ಚಿಗೂಡಿನಲ್ಲಿರುವ ಹಕ್ಕಿಗಳಂತೆ ಸ್ವಜಾತಿಯವರನ್ನ ಹಿಂದೆ, ಮುಂದೆ ಇಟ್ಟುಕೊಂಡು ಚುನಾವಣೆಗೆ ಹೋದರೆ ಖಂಡಿತ ಗೆಲ್ಲಲು ಆಗುವುದಿಲ್ಲ. ಟಿಕೆಟ್ ಆಕಾಂಕ್ಷಿಗಳು ಎಚ್ಚೆತ್ತುಕೊಂಡು ಬಲಿಷ್ಠವಾಗಿ ಪಕ್ಷ ಸಂಘಟನೆ ಮಾಡಲಿ ಎಂದು ಗುಂಡಯ್ಯ ಅವರು ತಾಕೀತು ಮಾಡಿದ್ದಾರೆ.

