ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರಿನ ಖಾಸಗಿ ರೆಸಾರ್ಟ್ ನಲ್ಲಿ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಪಕ್ಷ ಬಲವರ್ಧನೆ ಹಾಗೂ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮೂರು ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಮುಖಂಡರುಗಳ ಜತೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರ ನಿಖಿಲ್ ಕುಮಾರಸ್ವಾಮಿ ಅವರು ಸಭೆ ನಡೆಸಿದರು.
ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರ ನಿಖಿಲ್ ಕುಮಾರಸ್ವಾಮಿ ಸಭೆಯಲ್ಲಿ ಮಾತನಾಡಿ ಮುಖ್ಯವಾಗಿ ಪಕ್ಷವನ್ನ ಬೇರು ಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ನೊಂದಣಿ ಅಭಿಯಾನ ಅತ್ಯಂತ ಮಹತ್ವದ್ದಾಗಿದೆ. ಮತ್ತು ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಗಂಭೀರವಾಗಿ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ತಮ್ಮ ಆಂತರಿಕ ಜಗಳಗಳಲ್ಲಿ ನಿರತರಾಗಿದ್ದಾರೆ. ಆಡಳಿತದತ್ತ ಗಮನಹರಿಸುತ್ತಿಲ್ಲ ಎಂದು ನಿಖಿಲ್ ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ತಳಮಟ್ಟದ ಎರಡೂ ಪಕ್ಷದ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಎರಡೂ ಪಕ್ಷಗಳ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದು ಇದೇ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ ಮೇಲೆ ಕೆಲಸ ಮಾಡುತ್ತಿಲ್ಲ ಎಂಬ ಟೀಕೆಗಳಿಗೆ ಉತ್ತರಿಸಿ, ಕೇಂದ್ರ ಸಚಿವರಾಗಿ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಪಕ್ಷದ ಕೆಲಸಕ್ಕೆ ಸಾಕಷ್ಟು ಸಮಯ ನೀಡುತ್ತಿದ್ದಾರೆ. ವಯಸ್ಸಿಗೆ ಮೀರಿ ಎಚ್ ಡಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ, ಹೀಗಾಗಿ ಜೆಡಿಎಸ್ ರಾಜ್ಯ ಅಧ್ಯಕ್ಷರ ಬದಲಾವಣೆಯ ಪ್ರಶ್ನೆ ಅಪ್ರಸ್ತುತ. ಸದ್ಯಕ್ಕೆ ಜೆಡಿಎಸ್ ಅಧ್ಯಕ್ಷರಾಗಿ ಎಚ್ ಡಿ ಕುಮಾರಸ್ವಾಮಿ ಅವರೇ ಮುಂದುವರಿಯುತ್ತಾರೆಂದು ನಿಖಿಲ್ ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕರುಗಳಾದ ಹೆಚ್.ಎಸ್ ಶಿವಶಂಕರ್, ಹೆಚ್ ನಿಂಗಪ್ಪ, ಸುಧಾಕರ್ ಲಾಲ್, ಕೆ.ಎಂ ತಿಮ್ಮರಾಯಪ್ಪ, ವೀರಭದ್ರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಎ ತಿಪ್ಪೇಸ್ವಾಮಿ, ಮುಖಂಡರಾದ ಶಿರಾ ಆರ್ ಉಗ್ರೆಶ್, ತಿಪಟೂರು ಶಾಂತ ಕುಮಾರ್,
ಗುಬ್ಬಿ ನಾಗರಾಜು, ಹಿರಿಯೂರು ರವೀಂದ್ರಪ್ಪ, ಕುಣಿಗಲ್ ರವಿ, ನಾಗರಾಜಯ್ಯ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ತುಮಕೂರು ಜಿಲ್ಲಾಧ್ಯಕ್ಷ ಆರ್.ಸಿ ಅಂಜಿನಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿಎಸ್ ಸತ್ಯ ಪ್ರಕಾಶ್, ಎಸ್ಆರ್ ಗೌಡ್ರು, ಮದ್ದಿಮಡ್ಗು ರಂಗಸ್ವಾಮಿ, ರಾಘಣ್ಣ ಸೇರಿದಂತೆ ಮೂರು ಜಿಲ್ಲೆಯ ಮುಖಂಡರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರುಗಳು ಅಭಿಮಾನಿಗಳು ಉಪಸ್ಥಿತರಿದ್ದರು.