ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಜೆಡಿಎಸ್ ನಾಯಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರಿಗೆ ಬೆಂಗಳೂರಿನ ಶೇಷಾದ್ರಿಪುರಂ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ದೇವೇಗೌಡರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 ಜೆಡಿಎಸ್ ವರಿಷ್ಠ ಎಚ್​ಡಿ ದೇವೇಗೌಡರು ಮಾತನಾಡಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಅತ್ಯಂತ ದುಃಖವನ್ನುಂಟು ಮಾಡಿದೆ. 1991ರಲ್ಲಿ ಲೋಕಸಭೆಯಲ್ಲಿ ಡಾ.ಮನಮೋಹನ್ ಸಿಂಗ್ ನೋಡಿದ್ದೆ. ನಾನು ಕರ್ನಾಟಕದಿಂದ ಮೊದಲ ಬಾರಿ ಲೋಕಸಭೆಗೆ ಆಯ್ಕೆ ಆಗಿದ್ದೆ. ಪಿ.ವಿ.ನರಸಿಂಹರಾವ್​ ಸರ್ಕಾರದಲ್ಲಿ ಡಾ.ಸಿಂಗ್ ಹಣಕಾಸು ಸಚಿವರಾಗಿದ್ದರು. ಭಾರತದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಸಾಕಷ್ಟು ಶ್ರಮ ಹಾಕಿದ್ದರು.

ಡಾ.ಮನಮೋಹನ್ ಸಿಂಗ್​​ ವಿಶ್ವಸಂಸ್ಥೆಯಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ಪಿ.ವಿ.ನರಸಿಂಹರಾವ್​ ಪ್ರಧಾನಿ ಆಗಿದ್ದಾಗ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು.  ನಮ್ಮ ದೇಶದ 130 ಟನ್ ಚಿನ್ನ ಅಡವಿಟ್ಟದ್ದರು. ನಮ್ಮ ದೇಶಕ್ಕೆ ಕೆಟ್ಟ ಪರಿಸ್ಥಿತಿ ಉಂಟಾಗುತ್ತಿತ್ತು. ನರಸಿಂಹರಾವ್ ಸರ್ಕಾರದಲ್ಲಿ ಈ ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ಸೇವೆ ಮಾಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಪಾರುಮಾಡಿ ಗೌರವ ಉಳಿಸಿದ್ದು, ಮನಮೋಹನ್ ಸಿಂಗ್. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳುತ್ತ ಭಾವುಕರಾದರು.

ಡಾ.ಮನಮೋಹನ್ ಸಿಂಗ್ 10 ವರ್ಷ ದೇಶ ಆಳಿದರು. ಇಂದಿರಾ ಗಾಂಧಿ ನಂತರ 10 ವರ್ಷ ದೇಶ ಆಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಐದು ವರ್ಷ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 92 ವಯಸ್ಸಿನಲ್ಲಿ ಮನಮೋಹನ್ ಸಿಂಗ್ ನಮ್ಮನ್ನಗಲಿ ಹೋಗಿದ್ದಾರೆ. ಪ್ರಾಮಾಣಿಕ ವ್ಯಕ್ತಿ, ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಎಂದು ಗೌಡರು ಭಾವುಕರಾದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ವೆಂಕಟರಾವ್ ನಾಡಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ ಮತ್ತಿತರ ಮುಖಂಡರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

 

 

- Advertisement -  - Advertisement - 
Share This Article
error: Content is protected !!
";