ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಯಲು ಸೀಮೆಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಸೇರಿ ಹಲವು ಬೇಡಿಕೆ ಈಡೇರಿಗೆ ಒತ್ತಾಯಿಸಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹಿರಿಯೂರು ತಾಲೂಕು ಜೆಡಿಎಸ್ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದರು.
ನಿವೃತ್ತ ಮುಖ್ಯ ಎಂಜಿನಿಯರ್ ಹಾಗೂ ಜೆಡಿಎಸ್ ಮುಖಂಡ ಎಂ ರವೀಂದ್ರಪ್ಪ ಇವರ ನೇತೃತ್ವದಲ್ಲಿ ತಾಲೂಕಿನ ರೈತರ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಾಲೂಕಿನ ಪ್ರಮುಖ ನಾಲ್ಕು ಸಮಸ್ಯೆಗಳ ಬಗ್ಗೆ ಚರ್ಚಿಸಿ ಶೀಘ್ರ ಪರಿಹಾರ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ನಿಯೋಗವು ಮನವಿ ಮಾಡಿತು.
ಕೇಂದ್ರದ ಬಜೆಟ್ ನಲ್ಲಿ ಭದ್ರಾ ಮೇಲ್ದoಡೆ ಯೋಜನೆಗೆ ಘೋಷಣೆ ಮಾಡಿರುವ 5300 ಕೋಟಿ ಬಿಡುಗಡೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತಂದು ಜಿಲ್ಲೆಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ತಾಲೂಕಿನ ಜೆಜಿಹಳ್ಳಿ ಹೋಬಳಿಯಲ್ಲಿ ಅಂತರ್ಜಲ ಕುಸಿದು ಹೋಗಿದ್ದು ಆ ಭಾಗದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ರೈತರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಿಕೊಂಡು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹಾಗಾಗಿ ಗಾಯತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ ಬಜೆಟ್ ನಲ್ಲಿ 400 ಕೋಟಿ ಹಣ ಮೀಸಲಿರಿಸಿ ಕಾಮಗಾರಿ ಬೇಗ ಮುಗಿಸಿದರೆ ಅಲ್ಲಿನ ರೈತರು ಉಳಿಯುತ್ತಾರೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ತುರ್ತಾಗಿ ಹಣ ಬಿಡುಗಡೆ ಮಾಡಿಸುವಂತೆ ತಾವು ಒತ್ತಾಯಿಸಬೇಕು. ಬೀದರ್ ಶ್ರೀರಂಗಪಟ್ಟಣ 150 ಎ ರಸ್ತೆಗೆ ಹೊಂದಿಕೊಂಡಿರುವ ಕಳವಿಬಾಗಿ ಗ್ರಾಮಕ್ಕೆ ಒಳತಿರುವು ಹಾಗೂ ಅಂಡರ್ ಬ್ರಿಡ್ಜ್ ಸಂಪರ್ಕ ಕಲ್ಪಿಸಬೇಕು.
ಅಂಡರ್ ಬ್ರಿಡ್ಜ್ ಇಲ್ಲದ ಕಾರಣ ಇದುವರೆಗೂ ಸುಮಾರು 5 ಜನರು ಪ್ರಾಣ ಕಳೆದುಕೊಂಡಿದ್ದು 30 ರಿಂದ 40 ಜನರಿಗೆ ಕೈ-ಕಾಲು ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿವೆ. ಗ್ರಾಮದಲ್ಲಿ ಪ್ರಸಿದ್ಧ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನವಿದ್ದು ಪ್ರತೀ ಶನಿವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಸುಮಾರು 2 ರಿಂದ 3 ಸಾವಿರ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಶಾಲಾ ಮಕ್ಕಳು, ರೈತರು ಓಡಾಡಲು ತುಂಬಾ ತೊಂದರೆ ಉಂಟಾಗಿದ್ದು ಈ ವಿಷಯವನ್ನು ಈಗಾಗಲೇ ಸ್ಥಳೀಯ ತಾಲೂಕು ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕ ಮತ್ತು ಸಚಿವರ ಗಮನಕ್ಕೆ ತರಲಾಗಿದ್ದರೂ ಸಹ 11566 ಯಾವುದೇ ಪ್ರಯೋಜನವಾಗಿಲ್ಲ.

ಶಾಶ್ವತ ಪರಿಹಾರ ದೊರಕಿಲ್ಲ. ಜನರ ಜೀವಭದ್ರತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಳವಿಬಾಗಿ ಗ್ರಾಮಕ್ಕೆ ಸೂಕ್ತ ಒಳತಿರುವು ಹಾಗೂ ಅಂಡರ್ ಬ್ರಿಡ್ಜ್ ವ್ಯವಸ್ಥೆ ಮಾಡಿಕೊಡಬೇಕು.ತಾಲೂಕಿನ ತೋಟಗಾರಿಕೆ ಇಲಾಖೆಯಡಿ 2024-25-ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಅಡಿಕೆ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಒಟ್ಟು 4843 ರೈತರು 11566 ಎಕರೆಗೆ ರೂ.296.03 ಲಕ್ಷಗಳಷ್ಟು ವಿಮಾ ಕಂತನ್ನು ನೀಡಿ ನೋಂದಾಯಿಸಿಕೊಂಡಿದ್ದಾರೆ.
ಆದರೆ ಜಿಲ್ಲೆಗೆ ನಿಗದಿಯಾಗಿದ್ದ ಕ್ಷೇಮ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ವಿಮಾ ಮೊತ್ತ ಪಾವತಿಯಾಗಿರುವುದಿಲ್ಲ.ಈ ಹಿನ್ನೆಲೆಯಲ್ಲಿ ತಾವುಗಳು ದಯಮಾಡಿ ಸಂಬಂಧಿಸಿದವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಎಂ ರವೀಂದ್ರಪ್ಪನವರ ನೇತೃತ್ವದ ರೈತ ನಿಯೋಗ ಕೇಂದ್ರ ಸಚಿವರನ್ನು ಒತ್ತಾಯಿಸಿತು.
ನಿಯೋಗದ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿಯವರು ತಕ್ಷಣವೇ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಟ್ರೈಯಲ್ ರನ್ ಮಾಡುವಾಗ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಸೂಚಿಸಿ ರೈತರ ಸಮಸ್ಯೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಈ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ ಮಂಜುನಾಥ್, ಹಿರಿಯೂರು ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಲತಾ ರವೀಂದ್ರಪ್ಪ, ಐಮಂಗಲ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪೀರಯ್ಯ, ಉಪಾಧ್ಯಕ್ಷ ಹೆಚ್ ಜೆ ಕಾಂತರಾಜ್, ಕಾರ್ಯದರ್ಶಿ ಯಶವಂತರಾಜ್, ವೀರೇಂದ್ರ ಪಾಟೀಲ್, ರಂಗನಾಥ್, ಸಣ್ಣೀರಪ್ಪ, ದೇವರಾಜ್, ಮಂಜುನಾಥ್, ಕೇಶವಮೂರ್ತಿ, ವಿ ರೇಣುಕಾ, ಜಿ ಗಿರೀಶ್, ವಿರೂಪಾಕ್ಷ, ಗೋವಿಂದ ರಾಜು, ಆನಂದ ಗೌಡ, ಪೂ. ತಿಮ್ಮಣ್ಣ, ಬೋರನಕುಂಟೆ ಕರಿಯಣ್ಣ, ಹನುಮಂತಪ್ಪ ಮುಂತಾದವರು ಹಾಜರಿದ್ದರು.

