ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ನೀಡಬೇಕು ಮತ್ತು ಗ್ಯಾರಂಟಿ ಕ್ಯಾಲೆಂಡರ್ ಘೋಷಣೆ ಮಾಡುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಜನತಾದಳ (ಜಾತ್ಯತೀತ) ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಚಿತ್ರದುರ್ಗ ಜಿಲ್ಲಾ ಜನತಾದಳದ ಅಧ್ಯಕ್ಷ ಪಿಲಾಜನಹಳ್ಳಿ ಎಂ. ಜಯಣ್ಣ ಮಾತನಾಡಿ ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮಿ ಮತ್ತು ಯುವ ನಿಧಿ ಸೇರಿದಂತೆ ಐದು ಗ್ಯಾರೆಂಟಿ ಯೋಜನೆಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಏರಿತ್ತು. ಪ್ರತಿ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಬಣ್ಣದ ಮಾತುಗಳನ್ನ ಹೇಳಿತ್ತು. ಆದರೆ ಈ ಯೋಜನೆ ಶುರುವಿನಿಂದ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಹಾಕದಿರುವುದನ್ನು ಕರ್ನಾಟಕ ಪ್ರದೇಶ ಜನತಾದಳ ಪಕ್ಷ ಖಂಡಿಸುತ್ತದೆ. ಚುನಾವಣೆಗಳು ಬಂದಾಗ ಮಾತ್ರ ಹಣ ನೀಡುವ ಪರಿಪಾಠವನ್ನು ಅವರು ಖಂಡಿಸಿದರು.
ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಹಾಕದೆ ತಾಂತ್ರಿಕ ಸಮಸ್ಯೆ ಹೇಳಿವುದು ಹಾಸ್ಯಾಸ್ಪದವಾಗಿದೆ. ಬೆಂಗಳೂರು ಭಾರತದ ಸಿಲಿಕಾನ್ ಕ್ಯಾಪಿಟಲ್, ಜಾಗತಿಕ ತಂತ್ರಜ್ಞಾನ ಕೇಂದ್ರದಲ್ಲಿ ಡಿಬಿಟಿ ವರ್ಗಾವಣೆ ಸರಿಪಡಿಸಲಾಗುವುದಿಲ್ಲವೇ? ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯನವರು ಬಜೆಟ್ ರೂಪಿಸುವಲ್ಲಿ ನಿರತರಾಗಿದ್ದೀರಿ. ಆದರೆ ವಿಪರ್ಯಾಸವೆಂದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಣಕ್ಕಾಗಿ ೩-೪ ತಿಂಗಳು ಕಾಯಬೇಕಾಗಿದೆ. ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ “ಮ್ಯಾಜಿಕ್” ಆಗಿ ಹಣ ಹಾಕುವುದು ಸ್ಥಗಿತಗೊಂಡು ಪ್ರತಿ ತಿಂಗಳು 10ನೇ ತಾರೀಕಿನೊಳಗೆ ಹಣ ಹಾಕಬೇಕು ಎಂದು ಒತ್ತಾಯಿಸಿದರು.
ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆಗೆ ಆಗ್ರಹಿಸಿತ್ತು. ಇಂದು ಅದರ ಮುಂದಿನ ಭಾಗವಾಗಿ ನಮ್ಮ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮೂಲಕ ಆಗ್ರಹಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಡಿ.ಯಶೋಧರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯ್ಕ್, ರವೀಂದ್ರಪ್ಪ, ತಾಲ್ಲೂಕು ಅಧ್ಯಕ್ಷರಾದ ಸಣ್ಣ ತಿಮ್ಮಪ್ಪ, ಹನುಮಂತಪ್ಪ, ಕರಿಬಸಪ್ಪ, ಪರಮೇಶ್ವರಪ್ಪ, ವೀರಭದ್ರಪ್ಪ, ಮಂಜುನಾಥ್, ಜಾಲಿಕಟ್ಟೆ ರುದ್ರಪ್ಪ, ಪ್ರತಾಪ್ ಜೋಗಿ, ಅಬು, ಗೀತಮ್ಮ, ಚಿದಾನಂದ, ಚನ್ನಿಗರಾಯಪ್ಪ, ಆನಂದಪ್ಪ, ಆಚಾರ್, ವಿರೇಂದ್ರಕುಮಾರ್, ಯೂಸಫ್, ಈಚಘಟ್ಟದ ಪರಮೇಶ್ವರಪ್ಪ, ಶಂಕರಮೂರ್ತಿ, ಮಠದಕುರುಬರಹಟ್ಟಿ ಈರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.