ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಡಿಎಸ್ ಪಕ್ಷಕ್ಕೆ ಹೊಸ ಅಭ್ಯರ್ಥಿ ಬರಲಿದ್ದಾರೆ ಎನ್ನುವ ಊಹಾಪೋಹಗಳು ತಾಲೂಕಿನಲ್ಲೆಡೆ ಹರಿದಾಡುತ್ತಿವೆ.
ಇದು ಎಷ್ಟು ಸತ್ಯ ಎಷ್ಟು ಮಿತ್ಯ ಎನ್ನುವ ವಿಷಯವನ್ನೂ ಜೆಡಿಎಸ್ ವರಿಷ್ಠರೇ ಭವಿಷ್ಯದಲ್ಲಿ ಹೇಳಬೇಕಾಗಿದೆ.
2023ರಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಎಂ.ರವೀಂದ್ರಪ್ಪ ಅವರೇ ಮುಂಬರುವ ವಿಧಾನಸಭಾ ಚುನಾವಣೆಗೂ ಅಭ್ಯರ್ಥಿ ಎನ್ನಲಾಗುತ್ತಿದೆ. ಇದರ ಮಧ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಕೂಡಾ ತಾನು ಅಭ್ಯರ್ಥಿ ಆಕಾಂಕ್ಷಿ ಎನ್ನುತ್ತಿದ್ದಾರೆ ಎನ್ನಲಾಗಿದೆ.
ಇದರ ಮಧ್ಯ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಕುಂಚಿಟಿಗರೇ ಆಗಿರುವ ಅಭ್ಯರ್ಥಿಯೊಬ್ಬರು ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಯಾವ ಅಭ್ಯರ್ಥಿ ಬರಲಿ, ಇದ್ದವರೆ ಸ್ಪರ್ಧಿಸಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹಿರಿಯೂರು ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ಕುಗ್ಗಿಲ್ಲ. ಮುಂದೆಯೂ ಕುಗ್ಗುವುದಿಲ್ಲ. ಒಂದು ರೀತಿ ಹಿರಿಯೂರು ಜೆಡಿಎಸ್ ಪಕ್ಷದ ಕಾರ್ಯಕರ್ತರೆಲ್ಲ ತವರು ಮನೆಯಂತೆ ಕೆಲಸ ಮಾಡುತ್ತಿದ್ದಾರೆ.
ಈಗ ಹೊಸದಾಗಿ ಕೇಳಿ ಬರುತ್ತಿರುವ ಟಿಕೆಟ್ ಆಕಾಂಕ್ಷಿಯ ಹೆಸರು ಸತೀಶ್ ಗೌಡ. ಇವರು ಮೂಲತಃ ಹಾಸನ ಜಿಲ್ಲೆಯ ಅರಕಲಗೊಡು ತಾಲೂಕಿನ ಕುಂಚಿಟಿಗ ಸಮುದಾಯದ ಅಳುವನವರ ಕುಲಕ್ಕೆ ಸೇರಿದವರು ಎನ್ನಲಾಗುತ್ತಿದೆ.
41 ವರ್ಷದ ಸತೀಶ್ ಗೌಡ ಸದ್ಯ ದಾಬಸ್ ಪೇಟೆಯಲ್ಲಿ ಪೆಟ್ರೋಲ್ ಬಂಕ್ ಸೇರಿದಂತೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವುದಲ್ಲದೆ, ಓರ್ವ ರಿಯಲ್ ಎಸ್ಟೇಟ್ ಉದ್ಯಮಿ ಕೂಡಾ ಆಗಿದ್ದಾರೆ ಎನ್ನಲಾಗುತ್ತಿದೆ.
ಇದೇ ಆಗಸ್ಟ್-9 ರಂದು ಸತೀಶ್ ಗೌಡರ ಮನೆದೇವರು ಕೂನಿಕೆರೆ ಆಂಜನೇಯ ಆಗಿದ್ದು ಅಂದು ಬೃಹತ್ ಪೂಜೆ ಇಟ್ಟುಕೊಂಡು ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ನಗರಸಭೆಯ ಕೆಲ ಹಾಲಿ, ಮಾಜಿ ಸದಸ್ಯರು, ಅಧ್ಯಕ್ಷರುಗಳು ಒಂದು ಸುತ್ತಿನ ಮಾತುಕತೆ ಮಾಡಿದ್ದು ಕುಂಚಿಟಿಗ ಜಾತಿ ಹೊರೆತು ಪಡಿಸಿ ನೂರಾರು ಅಹಿಂದ ಮುಖಂಡರನ್ನು ಸತೀಶ್ ಗೌಡರಿಗೆ ಭೇಟಿ ಮಾಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಸತೀಶ್ ಗೌಡ ಅವರು ಹಿರಿಯೂರು ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ನಾಲ್ಕೈದು ಪ್ರಭಾವಿ ಯುವ ಪಡೆಯನ್ನ ಭೇಟಿ ಮಾಡಿದ್ದಾರೆ. ಅವರೊಂದಿಗೆ ಸತತ ಸಂಪರ್ಕದಲ್ಲಿದ್ದು ಈಗಿನಿಂದಲೇ ಪಕ್ಷ ಸಂಘಟನೆ ಮಾಡಲು ಆಗಮಿಸುವಂತೆ ಕೋರುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಹಿರಿಯೂರು ಜೆಡಿಎಸ್ ಪಕ್ಷದ ಮುಖಂಡರು ಸತೀಶ್ ಗೌಡರನ್ನ ಕೊಬ್ಬಿದ ಟಗರ್ ಆಗಿ ಬಳಸುತ್ತಾರೋ ಅಥವಾ ಅಭ್ಯರ್ಥಿ ಯಾರಾದರೇನು ಪಕ್ಷ ಗೆಲ್ಲಲಿ ಎನ್ನುವ ಮನಸ್ಥಿತಿ ಇಟ್ಟುಕೊಂಡು ತಾಲೂಕು ಜೆಡಿಎಸ್ ಮುಖಂಡರು ಪಕ್ಷ ಸಂಘಟನೆ ಮಾಡುತ್ತಾರೋ ಕಾದುನೋಡಬೇಕಿದೆ.
ಇದರ ಮಧ್ಯ ಸತೀಶ್ ಗೌಡ ಎನ್ನುವ ಟಿಕೆಟ್ ಆಕಾಂಕ್ಷಿ, ತನಗೆ ಪಕ್ಷ ಟಿಕೆಟ್ ನೀಡಲಿ, ಬಿಡಲಿ, ನಾನಂತೂ ಆಗಸ್ಟ್-9ರ ನಂತರ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲು ಸಿದ್ದರಾಗಿದ್ದೇನೆ. ಮುಂದೆ ಟಿಕೆಟ್ ಯಾರಿಗೆ ಕೊಡಬೇಕು ಎಂದು ಪಕ್ಷದ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ ಎನ್ನುವ ಮಾತುಗಳನ್ನೂ ಸತೀಶ್ ಗೌಡ ಅವರ ಆಪ್ತರಲ್ಲಿ ಹೇಳಿಕೊಂಡಿದ್ದಾರಂತೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಒಟ್ಟಾರೆ ಹಿರಿಯೂರು ವಿಧಾನಸಭಾ ಕ್ಷೇತ್ರ ಹೊರಗಿನ ಅಭ್ಯರ್ಥಿಗಳಿಗೆ ಹಾಸು ಹಾಕಲಿದೆ. ಇಲ್ಲಿಯ ತನಕ ಆಯ್ಕೆಯಾಗಿರುವ ಬಹುತೇಕ(ಒಂದಿಬ್ಬರು ಬಿಟ್ಟರೆ) ಹೊರಗಿನ ವ್ಯಕ್ತಿಗಳೇ ಆಯ್ಕೆಯಾಗುತ್ತಿದ್ದು ಅವರ ಸಾಲಿಗೆ ಸತೀಶ್ ಗೌಡ ಸೇರಲಿದ್ದಾರೆಯೇ ಎನ್ನುವುದನ್ನ ಕ್ಷೇತ್ರದ ಮತದಾರ ತೀರ್ಮಾನ ಮಾಡಲಿದ್ದಾನೆ.

