ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಕೆ ಶಿವಕುಮಾರ್ ಅವರ ವಿರುದ್ಧ ಜಾತ್ಯಾತೀತ ಜನತಾದಳ ಮತ್ತೆ ವಾಗ್ದಾಳಿ ಮುಂದುವರೆಸಿ ಕೂಡಲೇ ಅವರ ರಾಜಿನಾಮೆ ಪಡೆಯಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಶನಿವಾರ ಆಯೋಜಿಸಿದ್ದ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ 2025ರ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿರುವ ಜೆಡಿಎಸ್, ಇಂತಹವರು ಜನಪ್ರತಿನಿಧಿಯಾಗಿ ಮುಂದುವರೆಯಲು ನಾಲಾಯಕ್ ಎಂದು ಜೆಡಿಎಸ್ ಕಿಡಿಕಾರಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಡಿಕೆ ಶಿವಕುಮಾರ್ ಅವರೇ, ನೀವು ಶಾಸಕರಾದರೇನು? ಮಂತ್ರಿಯಾದರೇನು? ಡಿಸಿಎಂ ಆದರೇನು? ನೀನೊಬ್ಬ ಮನುಷ್ಯ ಅಷ್ಟೇ. ಜನರಿಂದ ಆಯ್ಕೆಯಾದ ನೀವು, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಿಮ್ಮ ಆದ್ಯ ಕರ್ತವ್ಯ. ಅದನ್ನು ಬಿಟ್ಟು ಪ್ರಶ್ನೆ ಮಾಡಿದವರಿಗೆ ಧಮ್ಕಿ, ಬೆದರಿಕೆ ಹಾಕುವುದು ಸಂವಿಧಾನದ ಪ್ರಕಾರ ಅಪರಾಧ! ನಾವು 80ರ ದಶಕದಲ್ಲಿ ಜೀವಿಸುತ್ತಿಲ್ಲ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.
ಮುಂದುವರೆದು ಪ್ರತಿಕ್ರಿಯಿಸಿರುವ ಜೆಡಿಎಸ್, ಡಿಕೆಶಿ ಅವರೇ, ನಿಮ್ಮ ಬಳಿ ದುಡ್ಡಿದ್ದರೆ, ಅದು ನಾಯಿ ಮೊಲೆ ಹಾಲಿದ್ದಂಗೆ . ಯಾರಿಗೂ ಪ್ರಯೋಜನವಿಲ್ಲ. ಅಧಿಕಾರದ ಮದ, ದಬ್ಬಾಳಿಕೆ ನೆತ್ತಿಗೇರಿದೆ. ಕೊತ್ವಾಲ್ ಶಿಷ್ಯನ ರೌಡಿಸಂ, ಗೂಂಡಾ ಪ್ರವೃತ್ತಿಗೆ ಕಡಿವಾಣ ಹಾಕದಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇಂತಹವರು ಜನಪ್ರತಿನಿಧಿಯಾಗಿ ಮುಂದುವರಿಯಲು ನಾಲಾಯಕ್ಕು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಂವಿಧಾನದ ರಕ್ಷಣೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಮೊದಲು ಡಿಕೆಶಿಯಂತಹ ರೌಡಿ ರಾಜಕಾರಣಿಯ ರಾಜೀನಾಮೆ ಪಡೆದು, ಬಳಿಕ ದೇಶದ ಜನತೆಗೆ ಸಂವಿಧಾನದ ಬಗ್ಗೆ ಪಾಠ ಮಾಡುವುದು ಒಳಿತು ಎಂದು ಜೆಡಿಎಸ್ ತಾಕೀತು ಮಾಡಿದೆ.
ಮಿಸ್ಟರ್‌ಧಮ್ಕಿ ಡಿಕೆಶಿ ಅವರೇ, ಆ ದಿನಗಳಲ್ಲಿ ನೀವು ಯಾರ ಜೊತೆ ಇದ್ದೀರಿ? ನಿಮ್ಮ ಹಿನ್ನೆಲೆ ಏನು? ಎಂಬುದು ಸಾಮಾನ್ಯ ಜನರಿಗೆ ಗೊತ್ತಿಲ್ಲ. ಉಪಮುಖ್ಯಮಂತ್ರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಬೀದಿರೌಡಿಯಂತೆ ವೇದಿಕೆಯಲ್ಲೇ ನಾಗರಿಕರಿಗೆ ಹೆದರಿಸುವುದು, ಬೆದರಿಸುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ.
ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಜನಸಾಮಾನ್ಯರಿಗೂ ಇದೆ. ಸಂವಿಧಾನ ರಕ್ಷಿಸುತ್ತೇವೆ ಎಂದು ಸಂವಿಧಾನ ಪುಸ್ತಕ ಹಿಡಿದರೇ ಸಾಲದು. ಈ ನಿಮ್ಮ ದರ್ಪ, ದುರಂಹಕಾರಕ್ಕೆ ಮತಹಾಕುವ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಜೆಡಿಎಸ್ ಎಚ್ಚರಿಸಿದೆ.

