ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಂಬರುವ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸಜ್ಜು ಮಾಡಲು ಪಕ್ಷದ ನಾಯಕರು ಸಭೆ ಕರೆದು ಚರ್ಚಿಸಿದ್ದಾರೆ.
ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಡಿಜಿಟಲ್ (ಮಿಸ್ಡ್ ಕಾಲ್) ಸದಸ್ಯತ್ವ ನೋಂದಣಿ ಹಾಗೂ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ತಯಾರಿ ಸೇರಿದಂತೆ ಪಕ್ಷ ಸಂಘಟನೆಯ ಬಗ್ಗೆ ಮೈಸೂರಿನ ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗಂಭೀರ ಚರ್ಚೆ ಮಾಡಲಾಯಿತು.
ಮೈಸೂರು, ಚಾಮರಾಜನಗರ ಮತ್ತು ಕೊಡುಗು ಸೇರಿದಂತೆ ಮೂರು ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಮುಖಂಡರ ಜತೆ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹನೂರು ಮಂಜುನಾಥ್, ಜಿ.ಡಿ ಹರೀಶ್ ಗೌಡ, ಮಾಜಿ ಶಾಸಕರಾದ ಕೆ ಮಹದೇವ್, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಮುಖಂಡರಾದ ಜೈ ಪ್ರಕಾಶ್, ಕೃಷ್ಣನಾಯಕ್, ಕಡುಬೂರು ಮಂಜು, ಮೈಸೂರು ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ಮೈಸೂರು ನಗರ ಅಧ್ಯಕ್ಷ ಚಲುವೇಗೌಡ, ಕೊಳ್ಳೇಗಾಲ ಪುಟ್ಟಸ್ವಾಮಿ , ಮಂಜುನಾಥ್, ಒಕ್ಕಲಿಗರ ಸಂಘದ ನಿರ್ದೇಶಕ ರವೀಂದ್ರ ಸೇರಿದಂತೆ ಮೂರು ಜಿಲ್ಲೆಗಳ ಜಿಲ್ಲಾ ಮಟ್ಟದಲ್ಲಿ ಪ್ರಮುಖ ನಾಯಕರು ಉಪಸ್ಥಿತರಿದ್ದರು.