ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಪಕ್ಷವು ಯಾವುದೇ ಕಾರಣಕ್ಕೂ ಎನ್‌ಡಿಎ ಮೈತ್ರಿ ಕಡಿದುಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ವಿಶ್ವಾಸ ಇರಿಸಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.
ಬೆಂಗಳೂರಿನ ಜೆಪಿ ಭವನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿದ ಬಳಿಕ ದೇವೇಗೌಡರು ಮಾತನಾಡಿದರು.
ನಾವು ಎನ್‌ಡಿಎ ಜೊತೆ ಇದ್ದೇವೆ. ಮೋದಿ ಅವರ ನೇತೃತ್ವದಲ್ಲಿ ವಿಶ್ವಾಸ ಇಟ್ಟಿದ್ದೇವೆ. ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ಇದನ್ನು ನಮ್ಮ ಕಾರ್ಯಕರ್ತರು, ಮುಖಂಡರು ಯಾರು ಮರೆಯಬಾರದು. ತುರ್ತು ಪರಿಸ್ಥಿತಿ ಹೇರಿದಾಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಿದ ಜಯಪ್ರಕಾಶ ನಾರಾಯಣ ಅವರ ಜತೆಯಲ್ಲಿ ನಾವು, ಅವತ್ತಿನ ಬಿಜೆಪಿಯವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ನಾವು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕು ಎಂದು ಗುಡುಗಿದರು.
ಸಿದ್ದರಾಮಯ್ಯ ಸಿಎಂ ಆಗುತ್ತಿದ್ದರು:
ಚಾಮರಾಜನಗರದಲ್ಲಿ ಜೆಡಿಎಸ್ ಪಕ್ಷದಲ್ಲೇ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡರು, ಅವರನ್ನು ನಾನು ಸಿಎಂ ಮಾಡಲು ತಯಾರಿದ್ದೆ. ಆದರೆ ಸೋನಿಯಾ ಗಾಂಧಿ ಅವರು ಧರ್ಮಸಿಂಗ್ ಅವರನ್ನು ಸಿಎಂ ಮಾಡಲು ಪಟ್ಟು ಹಿಡಿದರು. ಕಾಶ್ಮೀರದಲ್ಲಿ ಗುಲಾಮ್ ನಬಿ ಆಜಾದ್ ಅವರನ್ನು ಡಿಸಿಎಂ ಮಾಡಿದ್ದೀರಿ, ಮುಫ್ತಿ ಮೊಹಮ್ಮದ್ ಸಯ್ಯಿದ್ ಅವರನ್ನು ಸಿಎಂ ಮಾಡಿದ್ದೀರಿ. ಅದೇ ರೀತಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ಎಂದು ಮೂರು ಬಾರಿ ಸೋನಿಯಾ ಗಾಂಧಿ ಮನೆ ಬಾಗಿಲಿಗೆ ಹೋಗಿ ಕೇಳಿದೆ. ಸಿದ್ದರಾಮಯ್ಯ ಬೇಕಿದ್ದರೆ ಸೋನಿಯಾ ಗಾಂಧಿ ಅವರನ್ನು ಕೇಳಲಿ, ಅವರು ಇನ್ನೂ ಬದುಕಿದ್ದಾರೆ ಎಂದು ದೇವೇಗೌಡರು ಆಗ್ರಹ ಮಾಡಿದರು.
ಸಿದ್ದರಾಮಯ್ಯನವರು ಯಾವ ಸಂದರ್ಭದಲ್ಲಿ ಏನು ಬೇಕಾದರೂ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಸತ್ಯ ಹೇಳಲಿಲ್ಲ, ಆದರೆ ಸೋನಿಯಾ ಗಾಂಧಿ ಇದ್ದಾರೆ, ಅವರಿಗೆ ಸತ್ಯ ಗೊತ್ತಿದೆ. ಅಹಮದ್ ಪಟೇಲ್ ಅವರಿಗೆ ತಿಳಿದಿತ್ತು. ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಸೋನಿಯಾ ಗಾಂಧಿ ಸುತಾರಾಂ ಒಪ್ಪಲಿಲ್ಲ. ನೀವು ನಮ್ಮ ಸಿಎಂ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಬೇಕು, ಇಲ್ಲವಾದರೆ ನಾವು ಚುನಾವಣೆಗೆ ಹೋಗುತ್ತೇವೆ ಎಂದಾಗ ವಿಧಿ ಇಲ್ಲದೆ ನಾವು ಒಪ್ಪಿಕೊಂಡೆವು ಎಂದು ಗೌಡರು ತಿಳಿಸಿದರು.
ಆ ಚುನಾವಣೆಯಲ್ಲಿ ಚನ್ನಪ್ಪ ಎನ್ನುವ ಲೇವಾದೇವಿದಾರರೊಬ್ಬರ ಮನೆಗೆ ರಾತ್ರಿ 12ರ ಹೊತ್ತಿನಲ್ಲಿ ಹೋಗಿ ಎರಡು ಚೆಕ್ ಕೊಟ್ಟು ಎರಡು ಕೋಟಿ ಸಾಲ ತಂದೆ. ಆಗ ಜೆಡಿಎಸ್ 58 ಸೀಟು ಗೆದಿತ್ತು. ಆಗ ಈ ಸಿದ್ದರಾಮಯ್ಯ ಏನು ಮಾಡುತ್ತಿದ್ದರು. ಮಾತಾಡುವಾಗ ಕನಿಷ್ಠ ಪ್ರಮಾಣದ ಕ್ರಿಯೆ ಇರಬೇಕು, ಪ್ರಾಮಾಣಿಕತೆ ಇರಬೇಕು. ಸುಳ್ಳು ಹೇಳಬಾರದು ಎಂದು ದೇವೇಗೌಡರು ಕಿಡಿಕಾರಿದರು.

ಮೇಧಾವಿನಾ?: ರಾಮಕೃಷ್ಣ ಹೆಗಡೆ ಅವರು ಎಂಟು ವರ್ಷ ಸಿಎಂ ಆಗಿದ್ದರು. ಅವರು ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದಾರಾ?. ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ಈ ದೇವೇಗೌಡ. ಹೆಗಡೆ ಆಗಲಿ ಬೊಮ್ಮಾಯಿ ಆಗಲಿ ನಿಮ್ಮನ್ನು ಹಣಕಾಸು ಸಚಿವ ಮಾಡಲಿಲ್ಲ. ನೀವೇನೂ ಮಹಾ ಮೇಧಾವಿ ಆಗಿದ್ದೀರಾ? ನೀವು ಆಕ್ಸ್ಫರ್ಡ್ ವಿವಿಯಲ್ಲಿ ಹಣಕಾಸು ಪದವಿ ಪಡೆದಿದ್ರಾ? ನೀವು ಸುಪ್ರೀಂ ಕೋರ್ಟ್ ಲಾಯರ್ ಏನೂ ಅಲ್ಲ, ಹೈಕೋರ್ಟ್ನಲ್ಲಿಯೂ ಲಾಯರ್ ಅಲ್ಲ. ಮೈಸೂರಿನಲ್ಲಿ ಎಲ್ಲೋ ಒಂದೆರಡು ಕೇಸು ವಾದ ಮಾಡಿಕೊಂಡು ಇದ್ದವರು. ನಾನು ಬದುಕಿದ್ದೇನೆ, ಸೋನಿಯಾ ಗಾಂಧಿ ಕೂಡ ಬದುಕಿದ್ದಾರೆ. ಸುಳ್ಳು ಹೇಳಬೇಡಿ. ಜೆಡಿಎಸ್ ಪಕ್ಷಕ್ಕೆ ನಿಮ್ಮ ದೇಣಿಗೆ ಹೇಳಿ? ಎಂದು ದೇವೇಗೌಡರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕನ್ನಡ ಕಾವಲು ಸಮಿತಿಗೆ ಹೆಗಡೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಆಮೇಲೆ ಇನ್ನೊಮ್ಮೆ ಯಾವುದೋ ಪಶು ಸಂಗೋಪನೆ ಅಥವಾ ಇನ್ನೂ ಯಾವುದೋ ಖಾತೆ ನಿರ್ವಹಿಸಿದಿರಿ. ವೀರಪ್ಪ ಮೊಯಿಲಿ ಸಿಎಂ ಆಗಿದ್ದಾಗ ಸರಕಾರಿ ನೌಕರರ ಸಂಬಳ ಕೊಡೋಕೆ ದುಡ್ಡು ಇಲ್ಲ ಎಂದು ಪಿಯರ್ ಲೆಸ್ ಕಂಪನಿಯಿಂದ 200 ಕೋಟಿ ಸಾಲ ತಂದರು. ಅದಾದ ಮೇಲೆ ಬಂದ ಸರ್ಕಾರದಲ್ಲಿ ನಿಮ್ಮನ್ನು ಹಣಕಾಸು ಮಂತ್ರಿ ಮಾಡಿದೆ. ಆ ಸಾಲ ತಂದ ಸಂದರ್ಭದಲ್ಲಿ ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟು ಹೋಗಿತ್ತು. ನಿಮಗೆ ಗೊತ್ತಿಲ್ಲವೇ? ರಾಜ್ಯದ ಹಣಕಾಸು ಸ್ಥಿತಿ ಸರಿ ಮಾಡಲೇಬೇಕು ಎಂದು ನಾನು ನಿರ್ಧಾರ ಕೈಗೊಂಡು ಈ ವ್ಯಕ್ತಿಯನ್ನು ಹಣಕಾಸು ಮಂತ್ರಿಯನ್ನಾಗಿ ಮಾಡಿದೆ. ಅದೇ ನಾನು ಮಾಡಿದ ತಪ್ಪು ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.
ಅನೇಕ ಸಂದರ್ಭಗಳಲ್ಲಿ ನಾನು ಈ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಮಾಡಿದ್ದಕ್ಕೆ ಕಣ್ಣಿರು ಇಟ್ಟೆ. ಅವರನ್ನು ಹಣಕಾಸು ಮಂತ್ರಿ ಮಾಡಿದ್ದು ಹೆಗಡೆ ಅಲ್ಲ, ನಾನು. ಅದನ್ನು ಆ ಮನುಷ್ಯ ನೆನಪು ಇಟ್ಟುಕೊಳ್ಳಬೇಕು ಎಂದು ಗೌಡರು ಗುಡುಗಿದರು.
ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಯಾವ ಕೊಡುಗೆ ನೀಡಿಲ್ಲ. ನಾನು ಆ ವ್ಯಕ್ತಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಬೇಕೆಂದು ಹೊರಟಾಗ ಹೆಗಡೆ ಅವರು ತಮ್ಮ ಕೋಣೆಯಲ್ಲಿ ನನ್ನ ಕೈ ಹಿಡಿದು ಯಾರನ್ನಾದರೂ ಮಾಡು, ಆತನನ್ನು ಮಾತ್ರ ಮಾಡಬೇಡ ಎಂದು ಹೇಳಿದರು. ನಾನು ಹೆಗಡೆ ಅವರ ಮಾತು ಕೇಳಲಿಲ್ಲ ಎಂದು ವಿವರವಾಗಿ ಹೇಳಿದರು.
ಜಾಲಪ್ಪ ಅವರಿಂದ ನಾನು ರಾಜಕೀಯವಾಗಿ ಬೆಳೆದ ಅಂತಾರೆ. ಆ ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು ಇರಲಿ ಎಂದು ನಾನು ಮಂಜೂರು ಮಾಡಿದೆ. ದೇವರಾಜು ಅರಸು ಹೆಸರಿನಲ್ಲಿ ಸ್ಥಾಪನೆ ಆಗಲಿ ಎಂದು ಕೊಟ್ಟೆ. ಇವತ್ತು ಅದು ಜಾಲಪ್ಪ ಮೆಡಿಕಲ್ ಕಾಲೇಜು ಆಗಿದೆ. ಅವರ ಕುಟುಂಬದ ಆಸ್ತಿಯಾಗಿದೆ. ಸಮುದಾಯದ ಆಸ್ತಿ ಆಗಬೇಕಿದ್ದ ಮೆಡಿಕಲ್ ಕಾಲೇಜು ಅವರ ಕುಟುಂಬದ ಆಸ್ತಿಯಾಗಿ ಬದಲಾಗಿದೆ. ಇದು ಇವರ ಸಾಮಾಜಿಕ ನ್ಯಾಯ! ಎಂದು ದೇವೇಗೌಡರು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶ ಮಾಡಲು ಹೊರಟಾಗ ಪಕ್ಷದ ವೇದಿಕೆಯಲ್ಲಿ ಮಾಡಿ ಎಂದು ಸೂಚಿಸಿದೆ. ಅದನ್ನು ಅವರು ಕೇಳಲಿಲ್ಲ. ಪ್ರತ್ಯೇಕವಾಗಿ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡುವುದಾಗಿ ಹೊರಟರು. ಕೊನೆಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ನಾನು ಅವರನ್ನು ಪಕ್ಷದಿಂದ ಹೊರ ಹಾಕಲು ನಿರ್ಧಾರ ತೆಗೆದುಕೊಂಡೆ. ಈ ಬಗ್ಗೆ ನನಗೆ ಯಾವ ಪಶ್ಚಾತ್ತಾಪವು ಇಲ್ಲ. ಇಂತಹವರು ಅನೇಕರು ಬಂದಿದ್ದಾರೆ, ಹೋಗಿದ್ದಾರೆ. ಹೆದರುವುದಿಲ್ಲ. ನಾನು ಪಕ್ಷ ಕಟ್ಟುತ್ತೇನೆ. ಎಲ್ಲಿ ಕರೆದರೂ ಹೋಗುತ್ತೇನೆ. ದೇವೇಗೌಡ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು ಗೌಡರು ಹೇಳಿದರು.
ಉತ್ತರದಲ್ಲಿ ನಿತೀಶ್ ಕುಮಾರ್, ದಕ್ಷಿಣದಲ್ಲಿ ಕುಮಾರಸ್ವಾಮಿ:
ಉತ್ತರದಲ್ಲಿ ಜೆಡಿಯು, ದಕ್ಷಿಣದಲ್ಲಿ ಜೆಡಿಎಸ್ ಎಂದು ಘೋಷಣೆ ಮೊಳಗಿಸಿದ ದೇವೇಗೌಡರು, ಅಲ್ಲಿ ನಿತೀಶ್ ಕುಮಾರ್, ಇಲ್ಲಿ ಕುಮಾರಸ್ವಾಮಿ ಎಂದು ಒತ್ತಿ ಹೇಳಿದರು.
ನಿತೀಶ್ ಅವರು ಮೂವತ್ತು ವರ್ಷದಿಂದಲೂ ರಾಜಕಾರಣದಲ್ಲಿದ್ದಾರೆ. ಹತ್ತನೇ ಬಾರಿಗೆ ಪ್ರಮಾಣ ಮಾಡಿದ್ದಾರೆ. ಅವರು ಬಹಳ ಸೂಕ್ಷ್ಮವಾಗಿ ರಾಜಕಾರಣ ಮಾಡಿಕೊಂಡಿದ್ದಾರೆ. ಇದನ್ನು ನಾವು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕಾರ್ಯಕರ್ತರು, ಮುಖಂಡರಿಗೆ ದೇವೇಗೌಡರು ತಿಳಿಸಿ ಹೇಳಿದರು.

