ಜೀತ ಪದ್ದತಿ ಇನ್ನೂ ಜೀವಂತ: 36 ಕೂಲಿ ಕಾರ್ಮಿಕರ ರಕ್ಷಣೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು :
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲ್ಕುರಿಕೆ, ಮಂಜುನಾಥಪುರ ಸುತ್ತಮುತ್ತಲಿನ ಪ್ರದೇಶದಲ್ಲಿನ ಶುಂಠಿ ಹೊಲಗಳಲ್ಲಿ ಜೀತದಾಳುಗಳಂತೆ, ಬಲವಂತವಾಗಿ ದುಡಿಯುತ್ತಿದ್ದ 36 ಕಾರ್ಮಿಕರನ್ನು ಪೊಲೀಸರು ಬುಧವಾರ ರಾತ್ರಿ ರಕ್ಷಿಸಿದ್ದಾರೆ.

ಈ ಭಾಗದ ಕೆಲ ಪ್ರಭಾವಿಗಳು ರೈತರಿಂದ ನೂರಾರು ಏಕರೆ ಭೂಮಿಯನ್ನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ಆ ಶುಂಠಿ ಹೊಲದಲ್ಲಿ ಕೆಲಸ ಮಾಡಲು ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಂದ ಬಡ ಕೂಲಿ‌ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.

ಕಾರ್ಮಿಕರ ಬಳಿ ಇದ್ದ ಆಧಾರ್ ಕಾರ್ಡ್, ವೋಟರ್ ಐಡಿ, ಮೊಬೈಲ್‌ಇನ್ನಿತರೆ ವಸ್ತುಗಳನ್ನು ಕಿತ್ತುಕೊಂಡು ಹೆದರಿಸಿ ಬೆದರಿಸಿ ಶುಂಠಿ ಕ್ಯಾಂಪ್ (ಶೆಡ್)ನಲ್ಲಿರಿಸಿದ್ದರು. ಕಾರ್ಮಿಕರ ಕಾವಲಿಗೆ ಗೂಂಡಾಗಳನ್ನು ನೇಮಿಸಿದ್ದರು ಎಂದು ತಿಳಿದು ಬಂದಿದೆ.

ದಿನವಿಡೀ ನಿರಂತರವಾಗಿ ಹೊಲದಲ್ಲಿ ಕೆಲಸ ಮಾಡಬೇಕಿತ್ತು. ಒಂದು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಕೆಲಸ ಮಾಡದಿದ್ದರೆ ಕಾವಲುಗಾರರು ದೊಣ್ಣೆಗಳಿಂದ ದೇಹದಲ್ಲಿ ಬರೆ ಬರುವ ಹಾಗೆ ಹೊಡೆದು ದೌರ್ಜನ್ಯ ಮಾಡುತ್ತಿದ್ದರುಎಂದು ಕಾರ್ಮಿಕರು ಅಳಲು ‌ತೋಡಿಕೊಂಡಿರುವುದಾಗಿ ವರದಿ ಯಾಗಿದೆ.

ಮೊದಲು ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಶುಂಠಿ ಹೊಲಗಳಲ್ಲಿ ಈ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಹಾಲ್ಕುರಿಕೆ, ಮಂಜುನಾಥಪುರ ಗ್ರಾಮಗಳಿಗೆ ಕರೆದುಕೊಂಡು ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಸ್ಥಳೀಯರ ನೆರವಿನಿಂದ ಕಾರ್ಮಿಕರನ್ನು ರಕ್ಷಿಸಿ, ಅವರಿಗೆ ಹೊನ್ನವಳ್ಳಿ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";