ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಜಿಲ್ಲೆಯ ಒಟ್ಟು 7,377 ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.
ಸರ್ಕಾರದಿಂದ ನೀಡಲಾಗುತ್ತಿರುವ ನಿರುದ್ಯೋಗ ಭತ್ಯೆಯು ಜೀವನಪೂರ್ತಿ ಆದಾಯದ ಮೂಲವಲ್ಲ, ಇದೊಂದು ತಾತ್ಕಾಲಿಕ ನೆರವಾಗಿದೆ. ಫಲಾನುಭವಿಗಳು ಸ್ವಾವಲಂಬಿಗಳಾಗಲು ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಹೊಂದುವುದು ಅತ್ಯವಶ್ಯಕವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಮಾತ್ರ ಸಾಕಾಗುವುದಿಲ್ಲ, ಉದ್ಯಮ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ತಾಂತ್ರಿಕ ನೈಪುಣ್ಯತೆ ಮತ್ತು ಕಾರ್ಯಾನುಭವದ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ, ಫಲಾನುಭವಿಗಳು ಇಲಾಖೆಯ ಪೋರ್ಟಲ್ https://skillmission.karnataka.gov.in/ ನಲ್ಲಿ ತಕ್ಷಣವೇ ನೋಂದಣಿ ಮಾಡಿಕೊಂಡು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ), ಜಿಟಿಟಿಸಿ ಹಾಗೂ ರುಡ್‍ಸೆಟ್ ತರಬೇತಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿರುವ ವಿವಿಧ ಉದ್ಯೋಗಾಧಾರಿತ ತರಬೇತಿಗಳಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ.
ತರಬೇತಿ ಪಡೆದ ನಂತರ ಕೈಗಾರಿಕೆಗಳ ಅವಶ್ಯಕತೆಗೆ ಅನುಗುಣವಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ತರಬೇತಿಯಲ್ಲಿ ಭಾಗವಹಿಸಿದರೂ ಸಹ ಸರ್ಕಾರ ನಿಗದಿಪಡಿಸಿರುವ ಅವಧಿಯವರೆಗೆ ನಿರುದ್ಯೋಗ ಭತ್ಯೆ ಮುಂದುವರೆಯುತ್ತದೆ.
ಆದ್ದರಿಂದ ಯುವನಿಧಿ ಫಲಾನುಭವಿಗಳು ಯಾವುದೇ ಆತಂಕವಿಲ್ಲದೆ ಕೌಶಲ್ಯಾಭಿವೃದ್ಧಿ ತರಬೇತಿಗೆ ನೋಂದಣಿ ಮಾಡಿಕೊಂಡು ತರಬೇತಿ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

