ಕ್ರೀಡಾ ಸಾಧಕರಿಗೆ ಉದ್ಯೋಗ ಮೀಸಲಾತಿ: ಕ್ರಾಂತಿಕಾರಕ ಹೆಜ್ಜೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕಾರಿಯಲ್ಲಿ ಉದ್ಯೋಗ ಮೀಸಲಾತಿ ನೀಡುವುದು ಕ್ರೀಡಾಪಟುಗಳಿಗೆ ಪ್ರೇರಕ ಶಕ್ತಿಯಾಗಿದೆ. ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಉತ್ತೇಜನ ದೊರೆದಂತಾಗಿದೆ ಎಂದು ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ವಿವಿಧ ಇಲಾಖೆಗಳಲ್ಲಿ ನೌಕರಿ ಪಡೆದಿರುವ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಪಟು ನಿಕ್ಕಿನ್ ತಿಮ್ಮಯ್ಯ, ಕಬಡ್ಡಿ ಕ್ರೀಡಾಪಟು ಎನ್.ಉ?ರಾಣಿ, ಏಷ್ಯನ್ ಗೇಮ್ಸ್ ವಿಜೇತೆ ಓ.ಸುಷ್ಮಿತಾ ಪವಾರ್, ಅಥ್ಲೆಟಿಕ್ಸ್ ಕ್ರೀಡಾ ಸಾಧಕರಾದ ರಕ್ಷಿತಾ ರಾಜು, ವಿ.ರಾಧಾ ಹಾಗೂ ಎಂ.ಎಸ್. ಶರತ್ ಹಾಗೂ ವಿಶೇಷಚೇತನ ಕ್ರೀಡಾಪಟುಗಳ ಅಥ್ಲೆಟಿಕ್ಸ್ ತರಬೇತಿದಾರ ರಾಹುಲ್ ಬಾಲಕೃ? ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಕ್ರೀಡಾ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಸರ್ಕಾರಿ ನೌಕರಿಯನ್ನು ನೀಡುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ ಎಂದು ಸರ್ಕಾರದಿಂದ ದೊರೆತಿರುವ  ಪ್ರೋತ್ಸಾಹದ ಬಗ್ಗೆ  ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಜೇತರಾಗಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತಂದಿರುವ  ರಾಜ್ಯದ ಕ್ರೀಡಾಪಟುಗಳು ಹಂಚಿಕೊಂಡಿರುವ  ಮೆಚ್ಚುಗೆಯ ಮಾತುಗಳನ್ನು ಲೇಖನ ರೂಪದಲ್ಲಿ ನೀಡಲಾಗಿದೆ.

ನಿಕ್ಕಿನ್ ತಿಮ್ಮಯ್ಯ :
ಕೊಡಗು ಜಿಲ್ಲೆ ವಿರಾಜಪೇಟೆ ಚಂಬೆಬೆಳ್ಳೂರಿನ ನಿಕ್ಕಿನ್ ತಿಮ್ಮಯ್ಯ ಅವರು ಗ್ರಾಮೀಣ ಪ್ರದೇಶದಿಂದ ಬಂದ ನಾನು ಹಾಕಿ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆನ್ನೆಲುಬಾಗಿ ನಿಂತಿದೆ.  ಸರ್ಕಾರವು ಪ್ರತಿಯೊಂದು ಕ್ರೀಡಾ ಸಾಧನೆಗೂ ನಗದು ಪ್ರಶಸ್ತಿ ನಿಗಧಿಪಡಿಸಿರುವುದು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಪ್ರೇರಕವಾಗಿದೆ.  ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.೨ರಷ್ಟು ಹಾಗೂ ಪೊಲೀಸ್ ಇಲಾಖೆಯಲ್ಲಿ ಶೇ.೩ರಷ್ಟು ಉದ್ಯೋಗ ಮೀಸಲಾತಿ ನೀಡಿರುವುದು ಕ್ರಾಂತಿಕಾರಕ ಹೆಜ್ಜೆಯಾಗಿದೆ.

ಏಷ್ಯನ್ ಗೇಮ್ಸ್-೨೦೧೪ ಮತ್ತು ಕಾಮನ್ ವೆಲ್ತ್ ಗೇಮ್ಸ್-೨೦೧೪ರಲ್ಲಿ ಪದಕ ವಿಜೇತ ಭಾರತ ತಂಡದ ಭಾಗವಾಗಿದ್ದ ನನಗೆ ರಾಜ್ಯ ಸರ್ಕಾರದ ಅಬಕಾರಿ ಇಲಾಖೆ ಉಪಾಧೀಕ್ಷಕರ ಹುದ್ದೆಗೆ ನೇಮಕಾತಿ ಅವಕಾಶ ನೀಡಿರುವುದು ಅತ್ಯಾನಂದ ತಂದಿದೆ ಎಂದು ಹೇಳುವ ಮೂಲಕ ಉತ್ತಮ ಅವಕಾಶ ನೀಡಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸೂಚಿಸಿದ್ದಾರೆ.

ಉಷಾರಾಣಿ ಎನ್:
ಯಶವಂತಪುರ ನಿವಾಸಿ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಉಷಾರಾಣಿ ಅವರು ತಮ್ಮ ಕ್ರೀಡಾ ಸಾಧನೆಯಿಂದ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಯಿಂದ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ದೊರೆತಿದೆ.

೨೦೧೭ರ ಧಾರವಾಡದಲ್ಲಿ ನಡೆದ ರಾಜ್ಯ ಒಲಂಪಿಕ್ಸ್‌ನಲ್ಲಿ ಒಲಂಪಿಕ್ಸ್/ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಎ-ಬಿ ವೃಂದದ ಹುದ್ದೆ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಘೋಷಿಸಿದಂತೆ   ೨೦೨೪ರ ಆಗಸ್ಟ್ ೩ರಂದು ಸಿದ್ಧರಾಮಯ್ಯ ಅವರು ನನಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಯ ನೇಮಕಾತಿ ಪತ್ರ ನೀಡಲಾಗಿದೆ.  ಸರ್ಕಾರವು ಕ್ರೀಡಾ ಸಾಧಕರಿಗೆ ನೀಡಿರುವ ಉದ್ಯೋಗ ಮೀಸಲಾತಿ ಸೌಲಭ್ಯದಿಂದ ರಾಜ್ಯದ ಕ್ರೀಡಾಪಟುಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಓ. ಸುಷ್ಮಿತಾ ಪವಾರ್ :
ಏಷ್ಯನ್ ಗೇಮ್ಸ್ ಕಬಡ್ಡಿ ಚಿನ್ನದ ಪದಕ ವಿಜೇತರು ಹಾಗೂ ಬಿ. ವೃಂದದ ಗೆಜೆಟೆಡ್ ಹುದ್ದೆಗೆ ಆಯ್ಕೆಯಾಗಿರುವ ಸುಷ್ಮಿತಾ ಪವಾರ್ ಅವರು ತಮ್ಮ ಅಭಿಪ್ರಾಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾನು ೨೦೧೪ರಲ್ಲಿ ದಕ್ಷಿಣ ಕೊರಿಯಾ ಇಂಚನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗಳಿಸಿದ್ದೇನೆ.  ೨೦೧೪ರಲ್ಲಿ ಏಕಲವ್ಯ ಪ್ರಶಸ್ತಿ
, ಕೆಂಪೇಗೌಡ ಪ್ರಶಸ್ತಿ, ಮುಖ್ಯಮಂತ್ರಿಗಳ ಪದಕ, ಕೆಓಎ ಪ್ರಶಸ್ತಿ ಹಾಗೂ ೨೦೨೪ರಲ್ಲಿ ಕರ್ನಾಟಕ ಸಂಭ್ರಮ-೫೦ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನಳಾಗಿರುತ್ತೇನೆ. ರಾಜ್ಯ ಸರ್ಕಾರದ ಈ   ಉತ್ತೇಜನ ಇದೇ ರೀತಿಯಲ್ಲಿ ಮುಂದಿನ ಯುವ ಕ್ರೀಡಾಪಟುಗಳಿಗೆ ದೊರೆಯಬೇಕು.  ಏಷ್ಯನ್ ಗೇಮ್ಸ್ ವಿಜೇತಳಾದಾಗ ೨೫ಲಕ್ಷ ರೂ.ಗಳ ನಗದು ಬಹುಮಾನ ನೀಡಿ ರಾಜ್ಯ ಸರ್ಕಾರವು ಪ್ರೋತ್ಸಾಹ ನೀಡಿದೆಯಲ್ಲದೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ರಕ್ಷಿತಾ ರಾಜು :
ಚಿಕ್ಕ ಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಬಾಳೂರುಗುಡ್ಡನಹಳ್ಳಿಯ ಅಂಧ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಪ್ಯಾರಾ ಒಲಂಪಿಯನ್ ರಕ್ಷಿತಾ ರಾಜು ಅವರು ನನ್ನ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಅವಕಾಶ ನೀಡಲಾಗಿದೆ.  ೨೦೧೮ರಲ್ಲಿ ಜಕಾರ್ತದಲ್ಲಿ ಜರುಗಿದ ಪ್ಯಾರಾ ಏಷಿಯನ್ ಗೇಮ್ಸ್ ಹಾಗೂ ೨೦೧೯ರ ಜೂನಿಯರ್ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದೇನೆ.

          ೨೦೨೩ರ ಚೀನಾ ದೇಶದ ಹ್ಯಾಂಗ್ಹೋನಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಲಭಿಸಿದ್ದಕ್ಕೆ ಸರ್ಕಾರವು ೨೫ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದೆಯಲ್ಲದೆ, ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ತರಬೇತಿಗಾಗಿ ೨೫ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು ನೀಡಿದೆ.  ೨೦೨೪ರ ಪ್ಯಾರಿಸ್ ಪ್ಯಾರಾ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ನನ್ನ ಜೀವನದ ಹೆಮ್ಮೆಯ ಕ್ಷಣವಾಗಿದೆ.

          ರಾಜ್ಯ ಸರ್ಕಾರವು ಒಲಂಪಿಕ್ಸ್/ಪ್ಯಾರಾ ಒಲಂಪಿಕ್ಸ್ ಪದಕ ವಿಜೇತರಿಗೆ ಎ-ವೃಂದದ ಹುದ್ದೆಗಳನ್ನು ನೀಡುತ್ತಿರುವುದು ನನಗೆ ಮುಂದಿನ ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸ್ಫೂರ್ತಿಯಾಗಿದೆ ಎಂದು ಸರ್ಕಾರದ ಬಗ್ಗೆ ಬಣ್ಣನೆಯ ಮಾತುಗಳನ್ನು ಹೇಳಿದ್ದಾರೆ.

ವಿ.ರಾಧಾ:
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬೊಮ್ಮಸಮುದ್ರದ ಅಂಧ ಅಂತರ ರಾಷ್ಟ್ರೀಯ ಕ್ರೀಡಾಪಟು ವಿ.ರಾಧಾ ಅವರು ತಮ್ಮ ಮಾತುಗಳಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಾ
, ೨೦೧೭ರ ದುಬೈನಲ್ಲಿ ನಡೆದ ಯೂತ್ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿಪದಕ ಹಾಗೂ ೨೦೧೮ರಲ್ಲಿ ಜಕಾರ್ತದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿರುತ್ತೇನೆ. ಪದಕಗಳನ್ನು ಪಡೆದ ನನಗೆ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ತರಬೇತಿಗಾಗಿ ೨೫ಲಕ್ಷ  ರೂ. ಪ್ರೋತ್ಸಾಹಧನವನ್ನು ಸಹ ನೀಡಲಾಗಿದೆ. ಗ್ರಾಮೀಣ ಪ್ರದೇಶದಿಂದ ಬಂದ ನನ್ನ ಕ್ರೀಡಾ ಸಾಧನೆ ಗುರುತಿಸಿ   ಕಾರ್ಮಿಕ ಇಲಾಖೆಯಲ್ಲಿ ಬಿ-ವೃಂದದ ಕಾರ್ಮಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಎಂ.ಎಸ್. ಶರತ್ :
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಮಾಕನಹಳ್ಳಿಯ ಅಂಧ ಅಂತರರಾಷ್ಟ್ರೀಯ ಕ್ರೀಡಾಪಟು ೨೦೧೯ರಲ್ಲಿ ಸ್ವಿಡ್ಜರ್ಲೆಂಡ್‌ನಲ್ಲಿ ನಡೆದ ಜೂನಿಯರ್ ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ
, ೨೦೨೩ರ ಚೀನಾದ ಹ್ಯಾಂಗ್ಹೋನಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್‌ನಲ್ಲಿ ೧೫೦೦ ಮೀಟರ್ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿಪದಕ ವಿಜೇತನಾದ ನನ್ನ ಕ್ರೀಡಾ ಸಾಧನೆ ಆಧರಿಸಿ ೨೦೨೪ರ ಆಗಸ್ಟ್ ೩ರಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಸಹಕಾರ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಹುದ್ದೆಗೆ ನೇಮಕಾತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ವಿಶೇಷ ಚೇತನರ ಸಬಲೀಕರಣಕ್ಕಾಗಿ ಸರ್ಕಾರ ಇಟ್ಟಿರುವ ಹೊಸ ಹೆಜ್ಜೆ ದೇಶಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತರಬೇತುದಾರ ರಾಹುಲ್ ಬಾಲಕೃಷ್ಣ :
ಬೆಂಗಳೂರು ರಾಜರಾಜೇಶ್ವರಿ ನಗರದ ರೈಲ್ವೆ ಇಲಾಖೆ ತರಬೇತುದಾರರಾದ ರಾಹುಲ್ ಬಾಲಕೃಷ್ಣ ಅವರು ೨೦೧೬ ರಿಂದ ವಿಶೇಷ ಚೇತನ ಕ್ರೀಡಾಪಟುಗಳಿಗೆ ೧೫೦೦ ಮೀಟರ್ ಮಧ್ಯಮ ದೂರದ ಓಟದಲ್ಲಿ ತರಬೇತಿ ನೀಡುತ್ತಿದ್ದಾರೆ.  ಇವರು ತರಬೇತಿ ನೀಡಿರುವ ಕು.ರಕ್ಷಿತಾ ರಾಜು
, ರಾಧಾ ವಿ., ಎಂ.ಎಸ್. ಶರತ್ ಕ್ರೀಡಾಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
          ಸರ್ಕಾರದ ದೈಹಿಕ ಸಶಕ್ತರೊಂದಿಗೆ ವಿಶಿಷ್ಟಚೇತನರನ್ನು ಸಮಾನವಾಗಿ ಗುರುತಿಸಿ ನಗದು ಪುರಸ್ಕಾರ, ಉದ್ಯೋಗಾವಕಾಶಕ್ಕೆ ಪರಿಗಣಿಸುತ್ತಿರುವುದು ಅಭಿನಂದನೀಯ. ವಿಶಿಷ್ಟಚೇತನ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಲೇಖನ
:ಆರ್. ರೂಪಕಲಾ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ, ತುಮಕೂರು.

 

- Advertisement -  - Advertisement - 
Share This Article
error: Content is protected !!
";