ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ 66/11ಕೆವಿ ಗೊಡಬನಾಳು ವಿದ್ಯುತ್ ವಿತರಣಾ ಕೇಂದ್ರಕ್ಕೆ ಹಾಲಿ ಇರುವ ಹೊಳಲ್ಕೆರೆ-ಪಂಡರಹಳ್ಳಿ 66ಕೆವಿ ಮಾರ್ಗದಿಂದ 4.918 ಕಿಮೀ ಉದ್ದದ 66ಕೆವಿ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿರುತ್ತದೆ. ಇದೇ ಡಿಸೆಂಬರ್ 30ರಿಂದ ಈ ಮಾರ್ಗದಲ್ಲಿ ವಿದ್ಯುತ್ ಪ್ರಸರಣ ಚಾಲನೆಗೊಳ್ಳಲಿದೆ.
ಈ ಮಾರ್ಗದ ವಿದ್ಯುತ್ ಗೋಪುರಗಳನ್ನು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದ ರೆಂಬೆ,ಲೋಹದ ತಂತಿಗಳನ್ನು ಹಾಗೂ ಇತರೆ ಯಾವುದೇ ವಸ್ತುಗಳನ್ನು ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದೆಂದು ಸಾರ್ವಜನಿಕಗೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ಅಪಾಯದ ಮಟ್ಟದಲ್ಲಿರುವ ಮರಗಳನ್ನು ಸುರಕ್ಷತೆ ದೃಷ್ಟಿಯಿಂದ ತೆಗೆದು ಹಾಕಿ, ನಿಗಮದ ನಿಯಾಮನುಸಾರ ಸೂಕ್ತ ಪರಿಹಾರ ಪಡೆದುಕೊಳ್ಳಲು ಭೂ ಮಾಲೀಕರಿಗೆ ತಿಳಿಸಲಾಗಿದೆ. ಒಂದು ವೇಳೆ ಇದುವರೆಗೂ ಮರಗಳನ್ನು ತೆಗೆಯದೇ ಇದ್ದರೆ ಕೂಡಲೇ ಮರಗಳನ್ನು ತೆರವುಗೊಳಿಸಬೇಕು.
ಎಚ್ಚರಿಕೆ ಉಲ್ಲಂಘಿಸಿ ವಿದ್ಯುತ್ ಮಾರ್ಗದಿಂದ ಸಾರ್ವಜನಿಕರಿಗೆ ಹಾನಿ, ತೊಂದರೆ, ಅಪಘಾತಗಳು ಉಂಟಾದರೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗಿರುವುದಿಲ್ಲ.
ಗೊಡಬನಾಳು ಮತ್ತು ಬಂಜಗೊಂಡನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗ ಹಾದುಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಯೋಜನೆಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

