ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಕುಗ್ರಾಮ ಜೋಡಿಚಿಕ್ಕೇನಹಳ್ಳಿಯ ರೈತಾಪಿ ಕುಟುಂಬದ ಆರ್.ನವ್ಯ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಹುಟ್ಟಿದ ಊರು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜೋಡಿಚಿಕ್ಕೇನಹಳ್ಳಿಯ ರೈತ ಆರ್.ಟಿ.ರಾಮಕೃಷ್ಣ ಮತ್ತು ಇಂದಿರಮ್ಮ ದಂಪತಿಗಳ ಪುತ್ರಿಯಾದ ಆರ್.ನವ್ಯ ಅವರು ದಾವಣಗೆರೆಯ ಪುಷ್ಪ ಶಾಮನೂರು ಮಹಾಲಿಂಗಪ್ಪ ಪಿಯು ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಪಂಜಾಬಿನ ಲೂದಿಯಾನದಲ್ಲಿ ಡಿ.11 ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ನವ್ಯ ಅವರು ಆಟವಾಡಲಿದ್ದಾರೆ.
ಭಾನುವಾರ ಬೆಂಗಳೂರು ರೈಲ್ವೆ ನಿಲ್ದಾಣದಿಂದ ರೈಲಿನ ಮೂಲಕ ಅವರು ಲೂದಿಯಾನಕ್ಕೆ ಪ್ರಯಾಣ ಬೆಳೆಸಿದರು. ಅವರೊಟ್ಟಿಗೆ ಇತರೆ ಕ್ರೀಡಾ ಸಹೋದ್ಯೋಗಿಗಳಾದ ಬೆಂಗಳೂರಿನ 4 ಮಂದಿ, ಮೈಸೂರಿನ 4 ಮಂದಿ,
ಹೊನ್ನಾಳಿ 7 ಮಂದಿ ಹಾಗೂ ಚಿತ್ರದುರ್ಗದಿಂದ ನವ್ಯ ಸೇರಿ ಒಟ್ಟು 16 ಮಂದಿ ಆಟಗಾರರ ತಂಡ ಪ್ರಯಾಣ ಮಾಡಿದ್ದಾರೆಂದು ನವ್ಯ ಅವರ ದೊಡ್ಡಪ್ಪ ವಕೀಲ ಜೋಡಿಚಿಕ್ಕೇನಹಳ್ಳಿಯ ಆರ್.ಕೆ.ಕಾಂತರಾಜ್ ಪತ್ರಿಕೆಗೆ ತಿಳಿಸಿದ್ದಾರೆ.