ಹತ್ತಿ ಬೆಳೆ ಬಿತ್ತನೆಗೆ ಸಕಾಲವಲ್ಲ-ಜಂಟಿ ನಿರ್ದೇಶಕ ಶರಣಪ್ಪ ಮುದಗಲ್

News Desk

 ಚಂದ್ರವಳ್ಳಿ ನ್ಯೂಸ್, ವಿಜಯನಗರ(ಹೊಸಪೇಟೆ) :
ಹತ್ತಿ ಬೆಳೆ ಬಿತ್ತನೆಗೆ ಉದ್ದೇಶಿಸಿರುವ ಜಿಲ್ಲಾ ವ್ಯಾಪ್ತಿಯ ರೈತರಿಗೆ ಕೃಷಿ ವಿಜ್ಞಾನಿಗಳ ಶಿಫಾರಸ್ಸಿನಂತೆ ಬೇಸಿಗೆ ಸಕಾಲವಲ್ಲ
, ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಬಿತ್ತನೆಯ ಕಾಲಾವಧಿಯನ್ನು ಅನುಸರಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.

ಹತ್ತಿ ಬೆಳೆಯುವ ರೈತರು ಮಾರುಕಟ್ಟೆಯಲ್ಲಿರುವ ವಿವಿಧ ಹತ್ತಿ ತಳಿಗಳ ಲಭ್ಯತೆಯ ಮೇಲೆ ಕೆಲವು ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗಿದೆ. ಬಿತ್ತನೆ ಬೀಜ ಖರೀದಿಸುವ ಮುನ್ನ ಪ್ಯಾಕೇಟ್‌ನ್ನು ಪರಿಶೀಲಿಸಿ, ತಯಾರಕರ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿ ಇರುವುದನ್ನು ಹಾಗೂ ಅದರೊಂದಿಗೆ ನಿಜ ಚೀಟಿ ಪತ್ರ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಬಿತ್ತನೆ ಬೀಜವನ್ನು ಅಧಿಕೃತ ಪರವಾನಿಗೆ ಹೊಂದಿದ ಮಾರಾಟಗಾರರಿಂದ ಖರೀದಿಸಬೇಕು. ಕಡ್ಡಾಯವಾಗಿ ಖರೀದಿ ರಸೀದಿ ಪಡೆಯಬೇಕು. ಆಯಾ ತಳಿಯ ಬೇಸಾಯ ಪದ್ದತಿಯ ಬಗ್ಗೆ ಕರಪತ್ರ ಪಡೆಯಬೇಕು. ಬಿತ್ತನೆ ಬಳಿಕ ಕಟಾವು ಆಗುವವರೆಗೂ ಬೀಜದ ಚೀಲ, ಅಲ್ಪ ಪ್ರಮಾಣದ ಬೀಜ, ರಸೀದಿ ಮತ್ತು ಕರಪತ್ರವನ್ನು ಕಾಯ್ದಿರಿಸಿಕೊಳ್ಳಬೇಕು.

ಪ್ರತಿ ಬಿ.ಟಿ ಹತ್ತಿಯ ಪ್ಯಾಕೇಟ್ ಜತೆಗೆ 125 ಗ್ರಾಂ ಬಿ.ಟಿಯೇತರ(ರೆಪ್ಯೂಜಿ) ಬೀಜಗಳನ್ನು ನೀಡುತ್ತಿದ್ದು, ರೈತರು ತಮ್ಮ ಹೊಲದ ಸುತ್ತಲು ನಾಲ್ಕು ಸಾಲಿನಲ್ಲಿ ಈ ಬೀಜಗಳನ್ನು ಕಡ್ಡಾಯವಾಗಿ ಬಿತ್ತನೆ ಮಾಡಬೇಕು. ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ ನಿರೋಧಕ ಶಕ್ತಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಕಾಯಿಕೊರಕದ ಬಾಧೆಯನ್ನು ಗುರುತಿಸಲು ಅನುಕೂಲವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ವ್ಯಾಪ್ತಿ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";