ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ರಸ್ತೆಯ ನೆಹರು ನಗರ ನಿವಾಸಿ, ಪತ್ರಕರ್ತ ಚನ್ನಬಸವಯ್ಯ(46) ಗುರುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚನ್ನಬಸವಯ್ಯ ಅವರ ಇಚ್ಚೆಯಂತೆ, ಪಾರ್ಥೀವ ಶರೀರವನ್ನು ನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾನವಾಗಿ ನೀಡಲಾಯಿತು.
ಪತ್ರಿಕೋದ್ಯಮ ಹಾಗೂ ಕಾನೂನು ಪದವಿ ಪಡೆದಿದ್ದ ಚನ್ನಬಸಯ್ಯ ಆಕಾಶವಾಣಿ, ಡಿಡಿ ವಾಹಿನಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಕಾರಣ ಮೇ.28 ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ನಿಧನ ಹೊಂದಿದರು. ಮೃತರು ತಾಯಿ, ಸಹೋಧರ ಸೇರಿದಂತೆ ಅನೇಕ ಬಂಧುಗಳನ್ನು ಅಗಲಿದ್ದಾರೆ.
ಪತ್ರಕರ್ತರ ಸಂಘದಿಂದ ಸಂತಾಪ:
ನಗರದ ಪತ್ರಿಕಾ ಭವನದಲ್ಲಿ ಮೃತ ಚನ್ನಬಸವಯ್ಯ ಅವರ ಅಗಲಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂತಾಪ ಸಭೆ ನಡೆಯಿತು.
ಈ ವೇಳೆ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಚನ್ನಬಸಯ್ಯ ಅವರು ಸುದ್ದಿಗಳ ವಿಚಾರದಲ್ಲಿ ಎಂದೂ ಮೈ ಮರೆಯುತ್ತಿರಲಿಲ್ಲ ಎಂದು ಸ್ಮರಿಸಿದರು. ತಮ್ಮ ವೃತ್ತಿ ಬದುಕಿನ ಜೊತೆಗೆ ಬದುಕಿನಲ್ಲೂ ಸಾರ್ಥಕತೆ ಮೂಡುವ ಕೆಲಸ ಮಾಡಿರುವುದು ಅವರ ಸಾವಿನಲ್ಲಿ ಗೊತ್ತಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇಹದಾನ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಪತ್ರಕರ್ತರ ಸಂಘದ ಸದ್ಯರಾಗಿದ್ದ ಚನ್ನಬಸವಯ್ಯ ಅವರ ಅಗಲಿಕೆ ಎಲ್ಲರಿಗೂ ದುಃಖ ತಂದಿದೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಹಿರಿಯ ಪತ್ರಕರ್ತ ಶ.ಮಂಜುನಾಥ್ ಮಾತನಾಡಿ, ಕಾನೂನು ಪದವಿ ಪಡೆದು, ಪತ್ರಕೋದ್ಯಮಕ್ಕೂ ಬಂದ ಚನ್ನಬಸವಯ್ಯ ಆರಂಭದಲ್ಲಿ ಬಹಳ ನಿಷ್ಠುರವಾಗಿ ನಡೆದುಕೊಳ್ಳುತ್ತಿದ್ದರು. ಆದರೆ, ಕಳೆದ ಆರು ತಿಂಗಳಿಂದ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿ ಮಾಗಿದಂತೆ ಕಂಡು ಬರುತ್ತಿದ್ದರು ಎಂದು ಸ್ಮರಿಸಿದರು.
ಪತ್ರಕರ್ತರಾದ ಎಂ.ಎನ್.ಅಹೋಬಲಪತಿ, ತಿಪ್ಪೇಸ್ವಾಮಿ ನಾಕೀಕೆರೆ, ರಾಜಶೇಖರ್, ಮಾಲತೇಶ್ ಅರಸ್ ಮಾತನಾಡಿದರು. ಚನ್ನಬಸವಯ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಹರಿಯಬ್ಬೆ ಹೆಂಜಾರಪ್ಪ, ಬ್ರಹ್ಮಗಿರಿ ಶ್ರೀನಿವಾಸ್, ಗೌನಹಳ್ಳಿ ಗೋವಿಂದಪ್ಪ, ವಿನಾಯಕ ತೊಡರನಾಳು, ಕುಮಾರಸ್ವಾಮಿ, ಚಳ್ಳಕೆರೆ ವೀರೇಶ್, ಸುರೇಶ್ ಪಟ್ಟಣ್ ಮತ್ತಿತರರಿದ್ದರು.