ಪತ್ರಕರ್ತರು ನ್ಯಾಯಾಧೀಶರಂತೆ, ನೈತಿಕತೆ ವೃತ್ತಿ ಪ್ರಜ್ಞೆ ಇರಬೇಕು-ಶಿವಾನಂದ ತಗಡೂರು

News Desk

ಪತ್ರಕರ್ತರು ನ್ಯಾಯಾಧೀಶರಂತೆ, ನೈತಿಕತೆ ವೃತ್ತಿ ಪ್ರಜ್ಞೆ ಇರಬೇಕು-ಶಿವಾನಂದ ತಗಡೂರು
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪತ್ರಕರ್ತರು ಸಾಹಿತ್ಯ ಓದಿಕೊಂಡಿದ್ದರೆ ಮಾತ್ರ ವಿಭಿನ್ನವಾಗಿ ಶಕ್ತಿಯುತವಾದಿ ಸುದ್ದಿ ಕಟ್ಟಿಕೊಡಲು ಸಾಧ್ಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ನಗರದ ಪತ್ರಕರ್ತರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುವ ಪತ್ರಕರ್ತರಿಗೆ  ಕನ್ನಡ ಸಾಹಿತ್ಯಾಭಿರುಚಿ ಶಿಬಿರದ ಸಮಾರೋಪದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಪತ್ರಕರ್ತರು ನ್ಯಾಯಾಧೀಶರಂತೆ ಇರಬೇಕು. ವೃತ್ತಿ ಪ್ರಜ್ಞೆ, ನೈತಿಕತೆ ಬಹಳ ಮುಖ್ಯ ಎಂದು ರಾಜ್ಯಾಧ್ಯಕ್ಷ ತಗಡೂರು ಕಿವಿ ಮಾತು ಹೇಳಿದರು.

- Advertisement - 

ಸಾಹಿತ್ಯದ ತಿಳಿವಳಿಕೆ ಇಲ್ಲದಿದ್ದರೆ ಶಬ್ದ ಜೋಡಣೆ, ಶಬ್ದಗಳ ಬಳಕೆ ಮಾಡುವುದು ಸೇರಿದಂತೆ ಇಡೀ ಪತ್ರಕರ್ತರ ವೃತ್ತಿಯ ಬರವಣಿಗೆ ಕಷ್ಟವಾಗಲಿದೆ. ಪತ್ರಕರ್ತರಿಗೆ ನೈತಿಕತೆ ಇರಬೇಕು. ಸೌಜನ್ಯದ ನಡೆ ಇರಬೇಕು. ವೃತ್ತಿ ಜೊತೆಗೆ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರಿಗೆ ಬದ್ಧತೆ, ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷರು ಕಿವಿ ಮಾತು ಹೇಳಿದರು.

ಸುದ್ದಿಗಾಗಿ ಧಾವಂತದಿಂದಲೇ ಓಡುತ್ತಿರುತ್ತೇವೆ. ಸುದ್ದಿ ನೀಡುವ ಧಾವಂತದಲ್ಲಿ ತಪ್ಪುಗಳನ್ನ ಮಾಡಬಾರದು. ಇಂದು ಆ ರೀತಿ ಓಡುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣದಲ್ಲಿ ಸುದ್ದಿಗಳು ಬರುತ್ತಿರುತ್ತವೆ. ಅಂತಹ ತಾಣಗಳಲ್ಲಿ ಬಂದಿರುವ ಸುದ್ದಿ ನಿಜವೇ ಸುಳ್ಳೇ ಎನ್ನುವುದನ್ನ ಅರಿತುಕೊಳ್ಳುವುದು ಇಂದಿನ ಪತ್ರಕರ್ತರಿಗೆ ದೊಡ್ಡ ಸವಾಲ್ ಆಗಿದೆ ಎಂದು ಹೇಳಿದರು.

- Advertisement - 

ಯಾವ ಪತ್ರಕರ್ತ ತನ್ನ ವೃತ್ತಿ ಜೀವನದಲ್ಲಿ ಒಳಗಣ್ಣಿನಿಂದ ನೋಡಿ ವೃತ್ತಿ ಮಾಡುತ್ತಾನೋ ಅವನು ಬಹುದೊಡ್ಡ ಪತ್ರಕರ್ತನಾಗಲು ಸಾಧ್ಯವಿದೆ. ಜೊತೆಗೆ ಉತ್ತಮ ಸಾಹಿತಿ ಕೂಡಾ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪತ್ರಕರ್ತರು ಕಡ್ಡಾಯವಾಗಿ ಓದುವುದನ್ನ, ಬರೆಯುವುದನ್ನ ನಿತ್ಯ ಮಾಡಬೇಕು ಎಂದು ಅಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.

ಪತ್ರಕರ್ತರ ವೃತ್ತಿ ಜೀವನ ನಡೆಯುವಂತ ಸಣ್ಣ ಸಣ್ಣ ಘಟನೆಗಳನ್ನು ದಾಖಲೀಕರಣ ಮಾಡುವ ಕಾರ್ಯ ಮಾಡಬೇಕು. ಅದು ಸುದ್ದಿಗೂ ಮತ್ತು ಸಾಹಿತಿ ಆಗಲು ತುಂಬಾ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕ್ರಿಯಶೀಲನಾಗಿ ಕೆಲಸ ಮಾಡುವಂತ ಪತ್ರಕರ್ತರಿಗೆ ಸಾಕಷ್ಟು ಅನುಕೂಲ ಇರುತ್ತದೆ. ಒಂದು ಭಿನ್ನ ರೀತಿಯ ಸುದ್ದಿ ಕಟ್ಟಿಕೊಡುವುದರ ಜೊತೆಯಲ್ಲಿ ಉತ್ತಮ ಸಾಹಿತಿ ಕೂಡಾ ಆಗಲು ಅವಕಾಶ ಇರುತ್ತದೆ ಎಂದು ಶಿವಾನಂದ ತಗಡೂರು ತಿಳಿಸಿದರು.

ಶಿಬಿರದ ನಿರ್ದೇಶಕ ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ ಮಾತನಾಡಿ, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಕಲಿಯುವ ಮನಸ್ಸು ಬಹಳ ಮುಖ್ಯ. ಇಂಥಹ ಶಿಬಿರಗಳು ನಡೆದಾಗ ಇಲ್ಲಿ ಕಲಿತ ವಿದ್ಯೆಯನ್ನ ಭವಿಷ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಮಾತನಾಡಿ, ಪತ್ರಕರ್ತ ಮಿತ್ರರಿಗೆ ಸಾಹಿತ್ಯದ ಅರಿವು ಇರಲಿ ಎನ್ನುವ ಕಾರಣಕ್ಕೆ ಮೂರು ದಿನಗಳ ಶಿಬಿರ ಆಯೋಜನೆ ಮಾಡಿದ್ದೇವೆ. ಜೈಲಿನ ಕೈದಿಗಳಿಗೆ ಸಾಹಿತ್ಯ ಗೊತ್ತಿರಲಿ ಎನ್ನುವ ಕಾರಣಕ್ಕೆ ಮಾಡಿದ್ದೇವೆ. ಸಾಹಿತ್ಯಕ್ಕೆ ಬಹುದೊಡ್ಡ ಶಕ್ತಿ ಇದೆ. ಸಾಹಿತ್ಯ ಓದಿಕೊಂಡಿದ್ದರೆ ಯಾವರೊಬ್ಬರೂ ಜೈಲುವಾಸಿಗಳಾಗಲು ಸಾಧ್ಯವಿಲ್ಲ. ಕಲ್ಲು ಮನಸ್ಸಿನ ಕಟುಕರನ್ನೂ ಸಾಹಿತ್ಯ ಬದಲಾಯಿಸಲಿದೆ ಎಂದು ತಿಳಿಸಿದರು.

ಸಾಹಿತ್ಯದ ಪ್ರಜ್ಞೆ ಇದ್ದರೆ ಜೀವನದಲ್ಲಿ ತಪ್ಪು ಮಾಡಲು ಸಾಧ್ಯವೇ ಇಲ್ಲ. ಸಾಹಿತ್ಯವು ಮನುಷ್ಯರನ್ನಾಗಿ ಮಾಡಲಿದೆ ಎಂದು ತಿಳಿಸಿದರು.

ಸಾಹಿತ್ಯದಲ್ಲಿ ಸತ್ಯ ಹೇಳುವವರಿಗೆ ಕಂಟಕ ಜಾಸ್ತಿ ಇರುತ್ತದೆ. ಸತ್ಯ ಹೇಳುತ್ತಿದ್ದ ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಅಂಥವರ ಸಾವು ನೋಡಿದ್ದೇವೆ. ಆದರೂ ಹೆದರುವ ಅಗತ್ಯವಿಲ್ಲ. ಇಂಥಹ ಸನ್ನಿವೇಶಗಳಲ್ಲಿ ಪತ್ರಕರ್ತರಿಗೆ ಸತ್ಯ ಹೇಳಲು ಹೆಚ್ಚಿನ ಹೊಣೆಗಾರಿಕೆ ಇರುತ್ತದೆ.  ಆತ್ಮಸಾಕ್ಷಿ ಜಾಗೃತಗೊಳಿಸಿಕೊಂಡು ಭಾಷೆಯ ಹಿಡಿತದೊಂದಿಗೆ ಸೃಜನಾತ್ಮಕವಾಗಿ ಸತ್ಯವನ್ನು ಸಮಾಜಕ್ಕೆ ತಿಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿರುತ್ತದೆ ಎಂದು ಅಧ್ಯಕ್ಷ ಮುಕುಂದರಾಜ್ ತಿಳಿಸಿದರು.

ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ ಮಾತನಾಡಿ ಪತ್ರಕರ್ತರಿಗೆ ಇಂಥಹ ಕಮ್ಮಟಗಳು ಅಗತ್ಯವಾಗಿದ್ದು ಸದ್ಬಳಕೆ ಮಾಡಿಕೊಳ್ಳಬೇಕು. ಪತ್ರಕರ್ತರಿಗೆ ಸಾಮಾಜಿಕ ಆಯಾಮಗಳು ಗೊತ್ತಿರಬೇಕು. ಪತ್ರಕರ್ತರಿಗೆ ದಲಿತ, ರೈತ, ಪರಿಸರದಂತಹ ಚಳುವಳಿಗಳ ಕುರಿತು ಅರಿವು ಇರಬೇಕು. ಸಮಾಜದ ಅರಿವಿಲ್ಲದ ಪತ್ರಕರ್ತರು ವಸ್ತುನಿಷ್ಠವಾಗಿ ಸುದ್ದಿ ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಪತ್ರಕರ್ತರಿಗೆ ವಿವೇಚನೆ ಬಹಳ ಮುಖ್ಯ, ಸಾಹಿತ್ಯ ಓದು ಇನ್ನೂ ಮುಖ್ಯ. ಸೂಕ್ಷ್ನ ಸಂವೇದನೆಗಳಿಲ್ಲದಿದ್ದರೆ ಉತ್ತಮ ಬರವಣಿಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಶಿಬಿರಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಬಿ.ಗೌಡಗೆರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರದ ಸಂಯೋಜಕರಾದ ವೀರೇಶ್ ವಿ ಚಳ್ಳಕೆರೆ, ಸಹ ನಿರ್ದೇಶಕ ನಾಕೀಕೆರೆ ತಿಪ್ಪೇಸ್ವಾಮಿ, ಹಿರಿಯ ಪತ್ರಕರ್ತ ಸಿ.ಹೆಂಜಾರಪ್ಪ ಮಾತನಾಡಿದರು. ಮಮತಾ ಅರಸೀಕೆರೆ, ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ.ಪಿ.ಚಂದ್ರಿಕಾ ಮತ್ತಿತರರು ಇದ್ದರು.

 

 

Share This Article
error: Content is protected !!
";