ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಕಾಡಾನೆ ದಾಳಿಗೆ ರೈತನೊಬ್ಬ ಸೇರಿ ಮತ್ತೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪುಂಡಾನೆಯೊಂದು ಸೆರೆ ಹಿಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಜರುಗಿದೆ.
ಬನ್ನೂರು ಗ್ರಾಮದಲ್ಲಿ ಕಳೆದ ಬುಧವಾರ ರಾತ್ರಿ ಕಾಡಾನೆಯೊಂದು ಕೂಲಿ ಕಾರ್ಮಿಕ ಮಹಿಳೆಅನಿತಾರನ್ನು ಕೊಂದಿತ್ತು. ಈ ಘಟನೆಯ ಬಳಿಕ ಬಾಳೆಹೊನ್ನೂರು ಅರಣ್ಯ ಇಲಾಖೆ ಮುಂಭಾಗ ಸಾವಿರಾರು ರೈತರು, ಸಾರ್ವಜನಿಕರು ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಐದು ದಿನಗಳ ಅಂತರದಲ್ಲಿ ಕಾಡಾನೆ ತುಳಿತಕ್ಕೆ ಮತ್ತೊಬ್ಬ ವ್ಯಕ್ತಿ ಸುಬ್ಬೇಗೌಡ ಎಂಬವರು ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ ರೈತರು ಬೀದಿಗಿಳಿದು ಪ್ರತಿಭಟಿಸಿದ್ದರು. ಇದಾದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಿಂದ ನಾಲ್ಕು ಕುಮ್ಕಿ ಆನೆಗಳನ್ನು ಬಳಸಿಕೊಂಡು ಕಾಡಾನೆ ಸೆರೆಗೆ ಮುಂದಾಯಿತು.
ಎರಡು ದಿನದಿಂದ ಹಿಂದೆಯಷ್ಟೇ ಆನೆ ಸೆರೆ ಕಾರ್ಯಾಚರಣೆ ಆರಂಭವಾಗಿತ್ತು. ಒಂದು ಪುಂಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಆನೆ ತಪ್ಪಿಸಿಕೊಂಡಿದೆ. ನಂತರ ಎರಡನೇ ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಿದಾಗ ಆನೆ ಸೆರೆಯಾಗಿದ್ದು, ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆ ಸೆರೆಯಿಂದ ಎನ್.ಆರ್.ಪುರ ತಾಲೂಕಿನ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು ಬೇರೆ ಕಾಡಾನೆಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ.
ಭಾನುವಾರ ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಆನೆಗಳು ಕಾಣಿಸಿಕೊಂಡಿದ್ದವು. ಅರಣ್ಯ ಇಲಾಖೆಯ ವಿರುದ್ದ ಮಲೆನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅರಣ್ಯ ಇಲಾಖೆ ಕಚೇರಿ ಮುಂಭಾಗ ಸೇರಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ್ದರು.

