ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :
ಕಾಡಾನೆ ದಾಳಿಗೆ ಯುವತಿಯೊಬ್ಬಳು ಬಲಿಯಾಗಿರುವ ಘಟನೆ ಜಿಲ್ಲೆಯ ಎನ್. ಆರ್. ಪುರ ಸಮೀಪದ ಬನ್ನೂರು ಗ್ರಾಮದ ಬಳಿ ನಡೆದಿದೆ.
ಹೊನ್ನಳ್ಳಿ ಮೂಲದ ಅನಿತಾ (25) ಮೃತ ದುರ್ದೈವಿ. ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಅನಿತಾ ಕೆಲಸ ಮಾಡುತ್ತಿದ್ದರು. ಅಲ್ಲಿನ ತೋಟದ ಸಾಲು ಮನೆಗಳಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಜು.23ರ ಬುಧವಾರ 9 ಗಂಟೆಗೆ ಮನೆಗೆ ಹೋಗುವಾಗ ಕಾಡಾನೆ ದಾಳಿ ಮಾಡಿದೆ. ಕೂಡಲೆ ಗಾಯಾಳು ಅನಿತಾ ಅವರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಅನಿತಾ ಪ್ರಕರಣವನ್ನು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದು, ಮೃತರಿಗೆ ಕಾನೂನು ಪ್ರಕಾರ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯಿಂದ ಆನೆ ಸೆರೆಹಿಡಿದು ತಂದು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿತ್ತು ಎನ್ನಲಾಗಿದೆ. ಆ ಕಾಡಾನೆಗಳೀಗ ಗ್ರಾಮಗಳತ್ತ ಬರುತ್ತಿವೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಈ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಇರಲಿಲ್ಲ. ಜನರ ಮೇಲೆ ದಾಳಿ ಮಾಡಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇಂಥ ದಾಳಿಗಳಿಗೆ ಕಡಿವಾಣ ಹಾಕದೆ ಇದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಮಾಯಕರು ಕಾಡಾನೆ ದಾಳಿಗೆ ತುತ್ತಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

